ಕುಕ್ಕೆ ಸುಬ್ರಹ್ಮಣ್ಯ: ಅಡಿಕೆ ತೋಟಕ್ಕೆ ಕಂಟಕವಾದ ಮೈಲುತುತ್ತು ದ್ರಾವಣ

ಫಸಲು ನೀಡುವ ಮರಗಳು ಕಣ್ಣೆದುರೇ ಒಣಗಿ ಹೋಗುತ್ತಿರುವುದನ್ನು ಕಂಡು ರೈತ ಕುಟುಂಬ ಕಂಗಾಲು

kadaba times

ಕುಕ್ಕೆ ಸುಬ್ರಹ್ಮಣ್ಯ:  ಅಡಿಕೆ ಕೆಳಕ್ಕೆ ಉದುರದಂತೆ (ಕೊಳೆ ರೋಗ ನಿಯಂತ್ರಣಕ್ಕೆ) ರೈತರೊಬ್ಬರು ತಮ್ಮ ತೋಟದ ಅಡಿಕೆ ಗಿಡಗಳಿಗೆ ಮೈಲುತುತ್ತು ದ್ರಾವಣ ಸಿಂಪಡಿಸಿದ ಕೇವಲ ಮೂರೇ ದಿನದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ಗಿಡ ಮತ್ತು ಮರಗಳು ಸಂಪೂರ್ಣವಾಗಿ ಕರಟಿ ಹೋಗಿರುವ ಅತ್ಯಂತ ದಾರುಣ ಘಟನೆಯೊಂದು ಕಡಬ ತಾಲೂಕಿನ ಯೇನೆಕಲ್ ಗ್ರಾಮದಿಂದ ವರದಿಯಾಗಿದೆ. ತೋಟಕ್ಕೆ ಸಿಂಪಡಿಸಲು ಸಿದ್ಧಪಡಿಸಲಾಗಿದ್ದ ದ್ರಾವಣಕ್ಕೆ ಯಾರೋ  ವಿನಾಶಕಾರಿ ರಾಸಾಯನಿಕ ಬೆರೆಸಿರುವ ಬಲವಾದ ಶಂಕೆ ವ್ಯಕ್ತವಾಗಿದೆ.

kadaba times
uniq

ಎರಡೇ ದಿನದಲ್ಲಿ ಕರಟಿದ ಅಡಿಕೆ ಮರಗಳು:

ಯೇನೆಕಲ್ ಗ್ರಾಮದ ಗಿರಿಧರ ಅಂಬೆಕಲ್ಲು ಎಂಬುವರು ತಮ್ಮ ತೋಟದ ಅಡಿಕೆ ಮರಗಳ ರಕ್ಷಣೆಗಾಗಿ ಕಳೆದ ಜೂನ್ 19ರ ಶುಕ್ರವಾರದಂದು ಮೈಲುತುತ್ತು (ಬೋರ್ಡೋ) ದ್ರಾವಣವನ್ನು ಸಿಂಪಡಿಸಿದ್ದರು. ಆದರೆ, ಇದರಲ್ಲಿ ಮೊದಲು ಸಿದ್ಧಪಡಿಸಲಾಗಿದ್ದ ಒಂದು ಬ್ಯಾರೆಲ್‌ನ ದ್ರಾವಣವನ್ನು ಸಿಂಪಡಿಸಿದ ಜಾಗದಲ್ಲಿದ್ದ ಸುಮಾರು 300 ರಷ್ಟು ಅಡಿಕೆ ಸಸಿ ಮತ್ತು ಮರಗಳ ಎಲೆಗಳು ಜೂನ್ 21ರ ಆದಿತ್ಯವಾರ ಬೆಳಗ್ಗೆ ನೋಡುವಾಗ ಸಂಪೂರ್ಣವಾಗಿ ಸುಟ್ಟು ಹೋದಂತೆ ಕರಟಿ ಹೋಗಿವೆ. ಆದರೆ, ಅದೇ ತೋಟದ ಇತರ ಭಾಗಗಳಲ್ಲಿ ಬೇರೆ ಬ್ಯಾರೆಲ್‌ನಿಂದ ಮೈಲುತುತ್ತು ಸಿಂಪಡಿಸಿದ ಮರಗಳಿಗೆ ಯಾವುದೇ ತೊಂದರೆಯಾಗಿಲ್ಲ. ಕೇವಲ ಆರಂಭದ ಒಂದು ಡ್ರಂ ದ್ರಾವಣವನ್ನು ಎಲ್ಲೆಲ್ಲಿ ಸಿಂಪಡಿಸಲಾಗಿದೆಯೋ, ಅಲ್ಲಿ ಮಾತ್ರ ಈ  ಸಮಸ್ಯೆ ಕಾಣಿಸಿಕೊಂಡಿದೆ.

‘ರೌಂಡಪ್’ ಪುಡಿ ಬೆರೆಸಿರುವ ಶಂಕೆ:

ಆರಂಭದ ಒಂದು ಡ್ರಂ ದ್ರಾವಣವನ್ನು ಸಿಂಪಡಿಸಿದ ಜಾಗದ ಗಿಡಗಳು ಮಾತ್ರ ಕರಟಿ ಹೋಗಿರುವುದರಿಂದ, ಯಾರೋ ಉದ್ದೇಶಪೂರ್ವಕವಾಗಿ ಮರಗಳು ಮತ್ತು ಹುಲ್ಲು ಸಾಯಿಸಲು ಬಳಸುವ ‘ರೌಂಡಪ್’ ಎಂಬ ಅಪಾಯಕಾರಿ ರಾಸಾಯನಿಕ ಪುಡಿಯನ್ನು ಆ ಡ್ರಂ ಗೆ ಬೆರೆಸಿದ್ದಾರೆ ಎಂದು ಮನೆಯವರು ಮತ್ತು ಪಕ್ಕದ ತೋಟದ ನೆರೆಹೊರೆಯವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಗಿರಿಧರ ಅಂಬೆಕಲ್ಲು ರವರಿಗೆ ಊರಿನಲ್ಲಿ ಯಾರೂ ಶತ್ರುಗಳಿಲ್ಲದಿರುವುದು ಈ ವಿಲಕ್ಷಣ ಘಟನೆಗೆ ಮತ್ತಷ್ಟು ಗೊಂದಲ ಮೂಡಿಸಿದೆ.

kadaba times
kadaba times

ತೋಟದ ಮಾಲೀಕ ಗಿರಿಧರ ಅಂಬೆಕಲ್ಲು ಹೇಳುವುದೇನು?:

ಈ ಕುರಿತು ಆಘಾತ ವ್ಯಕ್ತಪಡಿಸಿರುವ ತೋಟದ ಮಾಲೀಕ ಗಿರಿಧರ ಅಂಬೆಕಲ್ಲು ಅವರು, “ಇದು ಖಂಡಿತವಾಗಿಯೂ ಮೈಲುತುತ್ತಿನ ಗುಣಮಟ್ಟದ ಸಮಸ್ಯೆ ಅಲ್ಲ. ಯಾಕೆಂದರೆ ಅದೇ ಮೈಲುತುತ್ತು ಬಳಸಿ ಸಿದ್ಧಪಡಿಸಿದ ದ್ರಾವಣದಿಂದ ಇಡೀ ತೋಟಕ್ಕೆ ಮದ್ದು ಸಿಂಪಡಿಸಿದ್ದೇವೆ. ಆದರೆ, ಆರಂಭದ ಮೊದಲ ಒಂದು ಡ್ರಂ ಸಿಂಪಡಿಸಿದ್ದಲ್ಲಿ ಮಾತ್ರ ಈ ಸಮಸ್ಯೆ ಕಂಡು ಬಂದಿದೆ. ಹುಲ್ಲು ಸುಟ್ಟು ಹೋಗುವಂತೆ ಹಾಕುವ ಪೌಡರನ್ನು ಯಾರೋ ಆ ಡ್ರಂನಲ್ಲಿ ಬೆರೆಸಿರಬಹುದೆಂಬ ಬಲವಾದ ಶಂಕೆ ಇದೆ. ಆದರೆ ನನಗೆ ಯಾರ ಮೇಲೂ ವೈಯಕ್ತಿಕವಾಗಿ ಅನುಮಾನ ಬರುತ್ತಿಲ್ಲ” ಎಂದು ತಿಳಿಸಿದ್ದಾರೆ.

ವರ್ಷಪೂರ್ತಿ ಕಷ್ಟಪಟ್ಟು ಬೆಳೆಸಿದ ಮುದ್ದಿನ ಅಡಿಕೆ ಸಸಿಗಳು ಮತ್ತು ಫಸಲು ನೀಡುವ ಮರಗಳು ಕಣ್ಣೆದುರೇ ಒಣಗಿ ಹೋಗುತ್ತಿರುವುದನ್ನು ಕಂಡು ರೈತ ಕುಟುಂಬ ಕಂಗಾಲಾಗಿದೆ. ಸ್ಥಳೀಯ ಕೃಷಿ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕಾಗಿ ಕೃಷಿಕರು ಆಗ್ರಹಿಸಿದ್ದಾರೆ.

Related Articles

Latest Articles