
ಆಲಂಕಾರು: ಸ್ಥಳೀಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಕಡಬ ತಾಲೂಕಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಆಲಂಕಾರು ಸಂಸ್ಥೆಯು ಪ್ರಸಕ್ತ 2026–27ನೇ ಶೈಕ್ಷಣಿಕ ವರ್ಷದಿಂದ “ಉನ್ನತ ಹಿರಿಯ ಪ್ರಾಥಮಿಕ ಶಾಲೆಯಾಗಿ” ಉನ್ನತೀಕರಿಸಲ್ಪಟ್ಟಿದೆ. ಇದರೊಂದಿಗೆ ಶಾಲೆಯಲ್ಲಿ 8ನೇ ತರಗತಿಯನ್ನು ಆಂಗ್ಲ ಮಾಧ್ಯಮ ವಿಭಾಗದಲ್ಲಿ ಪ್ರಾರಂಭಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.


ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ಮನ್ನಣೆ: ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತಾಲಯವು ಆಲಂಕಾರು ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ವಿದ್ಯಾರ್ಥಿ ಇಲಾಖೆಯ ಹಿತದೃಷ್ಟಿಯಿಂದ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆಯೊಂದನ್ನು ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ರಾಜ್ಯ ಸರ್ಕಾರವು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ಉಚಿತವಾಗಿ ಸಿಗಲಿ ಎಂಬ ಆಶಯದೊಂದಿಗೆ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಸರ್ಕಾರವು ತನ್ನ ಆದೇಶದಲ್ಲಿ ಶಾಲೆಯ ಉನ್ನತೀಕರಣಕ್ಕೆ ಕೆಲವು ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಶಾಲೆಯಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸಲು ಸೂಕ್ತವಾದ ಕೊಠಡಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳಿರುವುದು. ವರ್ಷದಿಂದ ವರ್ಷಕ್ಕೆ ಶಾಲೆಯಲ್ಲಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು. ಇಲಾಖೆ ಹಾಗೂ ಸರ್ಕಾರಕ್ಕೆ ಯಾವುದೇ ರೀತಿಯ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ, ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಶಾಲೆಯನ್ನು ಅತ್ಯುತ್ತಮವಾಗಿ ನಿರ್ವಹಿಸುವ ಸಾಧ್ಯತೆ ಇರುವುದು. ಬೋಧನೆಗೆ ಅಗತ್ಯವಿರುವ ಶಿಕ್ಷಕರನ್ನು ಇಲಾಖೆಯ ನಿಯಮಾವಳಿಗಳ ಅನ್ವಯ ಹುದ್ದೆಗಳನ್ನು ಸೃಷ್ಟಿಸದೆ ಮರುಹಂಚಿಕೆ ಮಾಡಿಕೊಳ್ಳುವ ಪರತ್ತಿಗೆ ಒಳಪಟ್ಟಿರುವುದು ಉನ್ನತೀಕರಣಕ್ಕೆ ಪ್ರಮುಖ ಕಾರಣಗಳಾಗಿವೆ.


ಸ್ಥಳೀಯರಲ್ಲಿ ಹರ್ಷದ ವಾತಾವರಣ: 2026–27ನೇ ಶೈಕ್ಷಣಿಕ ಸಾಲಿನಿಂದಲೇ ಈ ಆದೇಶ ಜಾರಿಗೆ ಬರುತ್ತಿರುವುದರಿಂದ, ಈ ಭಾಗದ ಬಡ ಹಾಗೂ ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ದೂರದ ಪೇಟೆಗಳಿಗೆ ಅಥವಾ ದುಬಾರಿ ಖಾಸಗಿ ಶಾಲೆಗಳಿಗೆ ಕಳುಹಿಸುವ ತಾಪತ್ರಯ ತಪ್ಪಿದಂತಾಗಿದೆ. ಹಳ್ಳಿಯ ಸರ್ಕಾರಿ ಶಾಲೆಯಲ್ಲೇ ಉತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಲಿರುವುದು ಆಲಂಕಾರು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಹರ್ಷವನ್ನು ತಂದಿದೆ
