ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವ ಈಶ್ವರ ಬಿ. ಖಂಡ್ರೆ: ಡೀಮ್ಡ್ ಅರಣ್ಯ ಸಮಸ್ಯೆ ಕುರಿತು ಮಹತ್ವದ ಹೇಳಿಕೆ

kadaba times

ಕುಕ್ಕೆ ಸುಬ್ರಹ್ಮಣ್ಯ: ಪವಿತ್ರ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪರಿಸರ ಸೌಂದರ್ಯ ಮತ್ತು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಕಠಿಣ ಕ್ರಮಗಳಿಗೆ ಮುಂದಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕೂ ಪ್ರಮುಖ ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಪಾಸಣಾ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

kadaba times
uniq

ದೇವಾಲಯದಲ್ಲಿ ದೇವರ ದರ್ಶನ ಮುಗಿಸಿದ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಸಚಿವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. “ಇಂದು ನಾನು ಕ್ಷೇತ್ರಕ್ಕೆ ಆಗಮಿಸುವಾಗ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತಟ್ಟೆಗಳು ಎಲ್ಲೆಂದರಲ್ಲಿ ಬಿದ್ದಿರುವುದನ್ನು ಕಂಡು ತೀವ್ರ ಆತಂಕವಾಯಿತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕ್ಷೇತ್ರಕ್ಕೆ ಬರುವ ರಸ್ತೆಗಳಲ್ಲಿ 2 ಹಂತದ ಕಟ್ಟುನಿಟ್ಟಿನ ಪ್ಲಾಸ್ಟಿಕ್ ತಪಾಸಣೆ ನಡೆಸಲು ಸೂಚಿಸಿದ್ದೇನೆ” ಎಂದರು.

ಡೀಮ್ಡ್ ಅರಣ್ಯ ಸಮಸ್ಯೆಗೆ ಜಂಟಿ ಸರ್ವೆ: ರಾಜ್ಯದಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಡೀಮ್ಡ್ ಅರಣ್ಯದ ಸಮಸ್ಯೆಯ ಕುರಿತು ಮಾತನಾಡಿದ ಸಚಿವರು, “ಕಳೆದ 2022ರಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ 3.33 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಅರಣ್ಯ ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ವ್ಯಾಪ್ತಿಯಲ್ಲಿ ಅಂಗನವಾಡಿಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಸಾರ್ವಜನಿಕರ ಪಟ್ಟಾ ಭೂಮಿಗಳೂ ಸೇರಿಕೊಂಡಿವೆ. ಈ ಗೊಂದಲವನ್ನು ಬಗೆಹರಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಕಂದಾಯ ಇಲಾಖೆಯ ಜೊತೆಗೂಡಿ ಜಂಟಿ ಸರ್ವೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು. ಇದೇ ವೇಳೆ ಉಡುಪಿ ಜಿಲ್ಲಾಧಿಕಾರಿಗಳು ಸರ್ವೆಯರ್‌ಗಳ ಕೊರತೆಯನ್ನು ಪ್ರಸ್ತಾಪಿಸಿದ್ದು, ವಿಶೇಷ ಸಿಬ್ಬಂದಿ ನಿಯೋಜನೆಗಾಗಿ ಕಂದಾಯ ಸಚಿವರೊಂದಿಗೆ ಸಮಾಲೋಚಿಸುವುದಾಗಿ ಭರವಸೆ ನೀಡಿದರು.

kadaba times
kadaba times

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಹೈಟೆಕ್ ತಂತ್ರಜ್ಞಾನ: “ಮಾನವನ ಜೀವ ಅತ್ಯಮೂಲ್ಯವಾಗಿದ್ದು, ವನ್ಯಜೀವಿ ದಾಳಿಯಿಂದ ಒಂದೇ ಒಂದು ಪ್ರಾಣಹಾನಿಯೂ ಸಂಭವಿಸದಂತೆ ಎಚ್ಚರಿಕೆ ವಹಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಡಲು ಡ್ರೋನ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳು ಮತ್ತು ವಿಶೇಷ ಕಮಾಂಡ್ ಸೆಂಟರ್ ಬಳಸಲಾಗುತ್ತಿದೆ” ಎಂದ ಸಚಿವರು, ಕುಕ್ಕೆಗೆ ಆಗಮಿಸುವ ಭಕ್ತರ ಸುರಕ್ಷತೆಗಾಗಿ ಚಿರತೆ ಬಾಧಿತ ಪ್ರದೇಶಗಳಲ್ಲಿ ಹೆಚ್ಚಿನ ಬೋನುಗಳನ್ನು ಇರಿಸಲು, ಆನೆಗಳು ಬಾರದಂತೆ ಕಂದಕ ಹಾಗೂ ಸೌರ ತಂತಿ ಬೇಲಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಆದೇಶಿಸಿದರು.

ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಕೇಸ್: ಕುಮಾರಧಾರಾ ನದಿಯ ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಚಿವರು ಕಠಿಣ ಎಚ್ಚರಿಕೆ ನೀಡಿದ್ದಾರೆ. “ಸ್ಥಳೀಯ ಸಂಸ್ಥೆಗಳು ನದಿಗೆ ನೇರವಾಗಿ ಸಂಸ್ಕರಿಸದ ಕೊಳಚೆ ಹಾಗೂ ತ್ಯಾಜ್ಯ ಜಲವನ್ನು ಹರಿಬಿಡುತ್ತಿರುವ ಘಟಕಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು. ನಿಯಮ ಉಲ್ಲಂಘಿಸುವವರಿಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೋಟಿಸ್ ನೀಡಬೇಕು. ಆದಾಗ್ಯೂ ಪದೇ ಪದೇ ತಪ್ಪು ಮರುಕಳಿಸಿದರೆ, ಅಂತಹವರ ವಿರುದ್ಧ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು” ಎಂದು ಕಠಿಣ ಸಂದೇಶ ರವಾನಿಸಿದರು.

Related Articles

Latest Articles