ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ ಮುಗಿಸಿ ಮರಳುವಾಗ ದುರಂತ: ಭೀಕರ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಸಾವು

5 ವರ್ಷದ ಮಗು ಗಂಭೀರ, ಹಲವರಿಗೆ ಗಾಯ

kadaba times

ಕಡಬ: ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಟೆಂಪೋ ಟ್ರಾವೆಲ್ಲರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಐದು ವರ್ಷದ ಮಗು ಸೇರಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

kadaba times
uniq

ಮೇ 25ರಂದು ಸಂಜೆ ಈ ದುರ್ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕೆರೆಸಂದ್ರಮನೆ ನಿವಾಸಿ ಆಂಜನಮ್ಮ (47) ಸ್ಥಳದಲ್ಲೇ ಕೊನೆಯುಸಿರೆಳೆದ ದುರ್ದೈವಿಯಾಗಿದ್ದಾರೆ.

ಸುಬ್ರಹ್ಮಣ್ಯ ದರ್ಶನ ಮುಗಿಸಿ ಮರಳುವಾಗ ದುರಂತ!

ದೇವನಹಳ್ಳಿಯಿಂದ ಹೊರಟಿದ್ದ ಯಾತ್ರಾರ್ಥಿಗಳ ತಂಡವು ಹೊರನಾಡು, ಶೃಂಗೇರಿ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿತ್ತು. ಮೇ 25ರಂದು ಬೆಳಗ್ಗೆ ಸೌತಡ್ಕ ಕ್ಷೇತ್ರಕ್ಕೆ ಭೇಟಿ ನೀಡಿ, ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಂಗಳೂರಿನತ್ತ ಮರಳುತ್ತಿದ್ದರು. ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಅವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ (ಕೆಎ 43 ಎ 6435) ವಾಹನದಲ್ಲಿ ಒಟ್ಟು 14 ಮಂದಿ ಇದ್ದರು. ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ.

5 ವರ್ಷದ ಮಗು ಗಂಭೀರ, ಹಲವರಿಗೆ ಗಾಯ

ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲ್ಲರ್‌ನಲ್ಲಿದ್ದ 5 ವರ್ಷದ ಬಾಲಕಿ ನಯಾನಿಕಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ನರಸಿಂಹಯ್ಯ, ವಿ. ಮಂಜುನಾಥ, ವಿ. ಗಂಗಾಧರ, ಪವಿತ್ರಾ, ಸಿರಿಪ್ರಿಯಾ ಹಾಗೂ ರತ್ನಮ್ಮ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಲೋಕೇಶ್ ದೇವನಹಳ್ಳಿ, ಪವನ್ ಸೋಮನಹಳ್ಳಿ ಕನಕಪುರ, ಕವಿತಾ ಸಿ.ಎಂ., ಜೀವನ್, ಆಶಾ, ಪ್ರೀತಮ್ ಹಾಗೂ ಶಿವ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

kadaba times
kadaba times

ಮೃತ ಆಂಜನಮ್ಮ ಅವರ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯ ಕೆಂಜಳ ತಿರುವು ಇದೀಗ ಸರಣಿ ಅಪಘಾತಗಳ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿಲ್ಲ.ಅತಿವೇಗದ ಚಾಲನೆ, ವೈಜ್ಞಾನಿಕವಾಗಿಲ್ಲದ ತಿರುವಿನ ವಿನ್ಯಾಸ ಹಾಗೂ ದೂರದ ಪ್ರಯಾಣದಿಂದ ಚಾಲಕರಲ್ಲಿ ಉಂಟಾಗುವ ನಿದ್ರಾಮಂಪರು ಅಪಘಾತಗಳಿಗೆ ಮುಖ್ಯ ಕಾರಣ ಎನ್ನಲಾಗಿದೆ. ದೇಶದ ಮೂಲೆ ಮೂಲೆಗಳಿಂದ ದಿನನಿತ್ಯ ಸಾವಿರಾರು ಯಾತ್ರಾರ್ಥಿಗಳ ವಾಹನಗಳು ಸಂಚರಿಸುವ ಈ ಹೆದ್ದಾರಿಯಲ್ಲಿ ತಕ್ಷಣವೇ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

Latest Articles