ನೂಜಿಬಾಳ್ತಿಲದಲ್ಲಿ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ :ಇಬ್ಬರ ವಿರುದ್ಧ FIR ದಾಖಲು

kadaba times

ನೂಜಿಬಾಳ್ತಿಲದ ಜೆ.ಜೆ ಕಾಂಪ್ಲೆಕ್ಸ್‌ನಲ್ಲಿ ಚೆನ್ನಪ್ಪ ಪೂಜಾರಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಮೊದಲು ಬರೆದಿಟ್ಟಿದ್ದ ಚೀಟಿಯ ಆಧಾರದ ಮೇಲೆ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

kadaba times
uniq

ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ಬಾಡಿಗೆ ಕೊಠಡಿಯಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ, ಮೃತರ ಜೇಬಿನಲ್ಲಿ ಸಿಕ್ಕಿದ ಡೆತ್ ನೋಟ್ ಆಧರಿಸಿ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಮೃತರನ್ನು ಬನಾರಿ ಮೂಲದ ಚೆನ್ನಪ್ಪ ಪೂಜಾರಿ (60 ವರ್ಷ) ಎಂದು ಗುರುತಿಸಲಾಗಿದೆ. ಇವರು ಕಲ್ಲುಗುಡ್ಡೆಯ ಜೆ.ಜೆ ಕಾಂಪ್ಲೆಕ್ಸ್‌ನ ಕೊಠಡಿಯೊಂದರಲ್ಲಿ ವಾಸವಿದ್ದರು. ಮೇ 1ರಂದು ಇವರು ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಇದು ಸಹಜ ಆತ್ಮಹತ್ಯೆ ಎಂದು ಭಾವಿಸಲಾಗಿತ್ತಾದರೂ, ಮಹಜರು ಸಂದರ್ಭದಲ್ಲಿ ಮೃತರ ಜೇಬಿನಲ್ಲಿ ಪತ್ತೆಯಾದ ಮೊಬೈಲ್ ಮತ್ತು ಸಾವಿಗೆ ಮುನ್ನ ಬರೆದಿಟ್ಟಿದ್ದ ಚೀಟಿಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಡೆತ್ ನೋಟ್‌ನಲ್ಲಿ ಏನಿದೆ? ಪೊಲೀಸರ ವಶದಲ್ಲಿರುವ ಮರಣ ಪತ್ರದಲ್ಲಿ (ಡೆತ್ ನೋಟ್), “ನನ್ನ ಸಾವಿಗೆ ಜೀತು (ಜಿತೇಶ್ ಪೂಜಾರಿ) ಮತ್ತು ಸತ್ಯ ಎಂಬವರೇ ಕಾರಣ. ನನ್ನ ಫೋನ್ ರೆಕಾರ್ಡ್‌ಗಳನ್ನು ಪರಿಶೀಲಿಸಿ” ಎಂದು ಬರೆಯಲಾಗಿದೆ ಎಂದು ಮೃತರ ಪುತ್ರ ರವಿಚಂದ್ರ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ಪೈಕಿ ಸತ್ಯ ಎಂಬವರು ಕ್ಯಾಂಟೀನ್ ನಡೆಸುತ್ತಿದ್ದ ಜಾಗದ ಮಾಲೀಕರು ಎಂದು ತಿಳಿದುಬಂದಿದೆ.

kadaba times
kadaba times

ಶಂಕೆ ಮೂಡಿಸಿದ ಬಾಗಿಲು: ಚೆನ್ನಪ್ಪ ಪೂಜಾರಿಯವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಕೊಠಡಿಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿರಲಿಲ್ಲ. ಇದು ಕೊಲೆ ಅಥವಾ ವ್ಯವಸ್ಥಿತ ಸಂಚು ಇರಬಹುದೇ ಎಂಬ ಸಂಶಯವನ್ನು ಕುಟುಂಬಸ್ಥರಲ್ಲಿ ಮೂಡಿಸಿದೆ. ಅಲ್ಲದೆ, ಸಾವಿನ ಹಿಂದಿನ ದಿನ ಸಂಜೆ ಅವರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ, “ನಾಳೆ ನೀವೆಲ್ಲರೂ ಬರಬೇಕು, ಇಬ್ಬರ ಮೇಲೆ ದೂರು ನೀಡಬೇಕಿದೆ” ಎಂದು ಹೇಳಿದ್ದರು ಎನ್ನಲಾಗಿದೆ.

ಈ ಬಗ್ಗೆ ಮೃತರ ಪುತ್ರ ರವಿಚಂದ್ರ ಅವರು ನೀಡಿದ ದೂರಿನ ಮೇರೆಗೆ ಜಿತೇಶ್ ಪೂಜಾರಿ ಮತ್ತು ಸತ್ಯ ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 108ರ ಅಡಿಯಲ್ಲಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Latest Articles