
ಕಡಬ: ತಾಲೂಕಿನ ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿನ ಮನೆಯೊಂದರಲ್ಲಿ ಬಲವಂತದ ಮತಾಂತರ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ಬಳಿಕ ಇದು ಕೇವಲ ಪ್ರವಾಸಕ್ಕೆ ಬಂದವರ ತಂಡ ಎಂಬುದು ದೃಢಪಟ್ಟಿದೆ.


ಏನಿದು ಘಟನೆ?
ದಿನಾಂಕ 07.05.2026 ರಂದು ಐತೂರು ಗ್ರಾಮದ ಕೆರ್ಮಾಯಿಯ ಮನೆಯೊಂದರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸೇರಿಸಿಕೊಂಡು ಮತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಕಡಬ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು.
ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದ್ದೇನು?: ಮನೆಯಲ್ಲಿ ಒಟ್ಟು 4 ಕುಟುಂಬಗಳಿಗೆ ಸೇರಿದ 23 ಮಂದಿ (ಪುರುಷರು, ಮಹಿಳೆಯರು ಮತ್ತು ಮಕ್ಕಳು) ಇದ್ದರು. ಇವರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಮಂಗಳೂರಿಗೆ ಪ್ರವಾಸದ ನಿಮಿತ್ತ ಬಂದಿದ್ದರು. ಇವರು ಬೆಂಗಳೂರಿನ ಚರ್ಚ್ ಒಂದರ ಫಾದರ್ ಅವರ ಸಹೋದರನ ಮನೆಯಲ್ಲಿ ತಂಗಿದ್ದರು. ಇವರಿಗೆ ಈ ಕುಟುಂಬದೊಂದಿಗೆ ಹಲವು ವರ್ಷಗಳ ಒಡನಾಟವಿದೆ.


ವಿಚಾರಣೆಯ ವೇಳೆ ಇವರೆಲ್ಲರೂ ಕಳೆದ 15 ರಿಂದ 20 ವರ್ಷಗಳಿಂದ ಸ್ವಯಂಪ್ರೇರಿತವಾಗಿ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಯಾವುದೇ ಬಲವಂತದ ಮತಾಂತರ ಇಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಈ ಮೂಲಕ ಕಳೆದ ಕೆಲವು ಗಂಟೆಗಳಿಂದ ಹರಿದಾಡುತ್ತಿದ್ದ ಮತಾಂತರದ ವದಂತಿಗಳಿಗೆ ಪೊಲೀಸರು ತೆರೆ ಎಳೆದಿದ್ದಾರೆ.
“ಸದರಿ ಮನೆಯಲ್ಲಿ ಯಾವುದೇ ರೀತಿಯ ಬಲವಂತದ ಮತಾಂತರವಾಗಲಿ ಅಥವಾ ಅನೈತಿಕ ಚಟುವಟಿಕೆಗಳಾಗಲಿ ನಡೆಯುತ್ತಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಅವರು ಕೇವಲ ಪ್ರವಾಸಕ್ಕಾಗಿ ಇಲ್ಲಿಗೆ ಬಂದಿದ್ದರು,” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
