ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಭೀತಿ ಹುಟ್ಟಿಸಿದ ಅಪರಿಚಿತ

kadaba times

ಉಪ್ಪಿನಂಗಡಿ: ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮನೆಗೆ ನುಗ್ಗಿ, ಒಂಟಿ ಮಹಿಳೆಯರಲ್ಲಿ ಭೀತಿ ಮೂಡಿಸಿದ್ದ ಅಪರಿಚಿತ ವ್ಯಕ್ತಿಯನ್ನು ಉಪ್ಪಿನಂಗಡಿಯ ಜಾಗೃತ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

kadaba times
uniq

ನಡೆದಿದ್ದೇನು? ಇಲ್ಲಿನ ಬ್ಯಾಂಕ್ ರಸ್ತೆಯ ಬಳಿ ವೃದ್ಧೆಯೊಬ್ಬರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಕುಡಿಯಲು ನೀರು ಕೇಳಿದ್ದಾನೆ. ವೃದ್ಧೆಯು ಮಾನವೀಯತೆಯ ದೃಷ್ಟಿಯಿಂದ ನೀರು ತರಲು ಅಡುಗೆ ಕೋಣೆಗೆ ಹೋದ ಸಮಯದಲ್ಲಿ, ಕೂಡಲೇ ಮನೆಗೆ ನುಗ್ಗಿದ ವ್ಯಕ್ತಿ ಒಳಗಿನಿಂದ ಬಾಗಿಲ ಚಿಲಕ ಹಾಕಿದ್ದಾನೆ. ಇದರಿಂದ ಬೆದರಿದ ವೃದ್ಧೆ ಜೋರಾಗಿ ಕಿರುಚಿಕೊಂಡಿದ್ದಾರೆ.

ವೃದ್ಧೆಯ ಕೂಗಾಟ ಕೇಳಿ ಗಾಬರಿಗೊಂಡ ವ್ಯಕ್ತಿ ಅಲ್ಲಿಂದ ಪರಾರಿಯಾಗಿ, ಸಮೀಪದಲ್ಲೇ ಇದ್ದ ಮತ್ತೊಂದು ಒಂಟಿ ಮಹಿಳೆ ಇರುವ ಮನೆಗೆ ನುಗ್ಗಲು ಯತ್ನಿಸಿದ್ದಾನೆ. ಅಲ್ಲಿಯೂ ಬಾಗಿಲು ಹಾಕಲು ಯತ್ನಿಸಿದಾಗ ಸ್ಥಳೀಯರು ಮತ್ತು ಆ ಮನೆಯ ಮಹಿಳೆ ಬೊಬ್ಬೆ ಹಾಕಿದ್ದಾರೆ. ತಕ್ಷಣ ಅಲ್ಲಿಂದ ಓಡಿದ ಆತ ಉದ್ಯಮಿಯೊಬ್ಬರ ಮನೆಯ ಹಿಂಭಾಗದ ಕಟ್ಟಡದಲ್ಲಿ ಅಡಗಿಕೊಂಡಿದ್ದನು.

kadaba times
kadaba times

ಮೂಕನಂತೆ ನಟಿಸಿ ಮಲೆಯಾಳಿಯಲ್ಲಿ ಮಾತು: ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶೇಷವೆಂದರೆ, ಮನೆಯ ಬಳಿ ನೀರು ಕೇಳುವಾಗ ಮೂಕನಂತೆ ಸನ್ನೆ ಮಾಡಿದ್ದ ಈತ, ಪೊಲೀಸರ ವಶಕ್ಕೆ ಸಿಗುತ್ತಿದ್ದಂತೆ ಮಲೆಯಾಳಿ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ್ದಾನೆ. ತಾನು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವವನು ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ನಾಗರಿಕರ ಆಗ್ರಹ: ಬಿಸಿಲ ಬೇಗೆಯಿಂದ ಬಂದವನಿಗೆ ನೀರು ಕೊಡಲು ಹೋದಾಗ ಈ ರೀತಿ ಅನಿಷ್ಟ ವರ್ತನೆ ತೋರಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. “ಇಂತಹ ವ್ಯಕ್ತಿಗಳ ಪೂರ್ವಾಪರವನ್ನು ಸರಿಯಾಗಿ ವಿಚಾರಿಸಬೇಕು ಮತ್ತು ಇವರ ಹಿಂದೆ ಯಾವುದಾದರೂ ಸಂಚು ಇದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಸ್ತುತ ಉಪ್ಪಿನಂಗಡಿ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Articles

Latest Articles