
ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಏಪ್ರಿಲ್ 27 ರಿಂದ ಮೇ 2 ರವರೆಗೆ ರಥೋತ್ಸವ, ವಿದ್ವತ್ ಗೋಷ್ಠಿ ಹಾಗೂ ಸಾಂಸ್ಕೃತಿಕ ಉತ್ಸವಗಳು ನಡೆಯಲಿವೆ. ಪೂರ್ಣ ವಿವರ ಇಲ್ಲಿದೆ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಸಂಪುಟ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ಈ ವರ್ಷದ ‘ನರಸಿಂಹ ಜಯಂತಿ’ ಕಾರ್ಯಕ್ರಮಗಳು ಏಪ್ರಿಲ್ 27 ರಿಂದ ಮೇ 2 ರವರೆಗೆ ಅತ್ಯಂತ ವೈಭವದಿಂದ ಜರುಗಲಿವೆ. ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ:
-
ಏಪ್ರಿಲ್ 28: ಗಣಹೋಮ, ಶ್ರೀ ನರಸಿಂಹ ಹೋಮ, ಶ್ರೀ ವೇದವ್ಯಾಸ ಜಯಂತಿ ಹಾಗೂ ವಸಂತ ಪೂಜೆ ನಡೆಯಲಿದೆ.
-
ಏಪ್ರಿಲ್ 30 (ನರಸಿಂಹ ಜಯಂತಿ): ಪ್ರಾತಃಕಾಲ ಶ್ರೀ ನರಸಿಂಹ ದೇವರಿಗೆ ಮಹಾಭಿಷೇಕ, ರಾತ್ರಿ ಹೊರಾಂಗಣ ಮತ್ತು ರಾಜಬೀದಿಯಲ್ಲಿ ವೈಭವದ ವಿಮಾನೋತ್ಸವ, ವಸಂತ ಪೂಜೆ ಹಾಗೂ ಡೋಲೋತ್ಸವ ಜರುಗಲಿದೆ.
-
ಮೇ 1 (ವ್ಯಾಸ ಪೂರ್ಣಿಮಾ): ಪೂರ್ವಾಹ್ನ ವ್ಯಾಸ ಪೂಜೆ ಹಾಗೂ ಸಂಜೆ ಅದ್ಧೂರಿ ಮಹಾರಥೋತ್ಸವ ನಡೆಯಲಿದೆ.
-
ಮೇ 2: ಪವಿತ್ರ ಕುಮಾರಧಾರಾ ನದಿಯಲ್ಲಿ ಅವಭೃತೋತ್ಸವ (ಆರಟು) ನಡೆಯುವುದರೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಸಾಂಸ್ಕೃತಿಕ ಮತ್ತು ವಿದ್ವತ್ ಪ್ರಭೆ:
ವೇದವ್ಯಾಸ ಸಂಶೋಧನ ಕೇಂದ್ರದ ಸಹಭಾಗಿತ್ವದಲ್ಲಿ ಮಠದ ಶ್ರೀ ಅನಿರುದ್ಧತೀರ್ಥ ವೇದಿಕೆಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


-
ಉದ್ಘಾಟನೆ: ಏಪ್ರಿಲ್ 28ರಂದು ಸಂಜೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಬಳಿಕ ಚೆನ್ನೈನ ವಿದ್ವಾನ್ ಕುನ್ನಕುಡಿ ಬಾಲಮುರಳಿಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.
-
ಏಪ್ರಿಲ್ 29: ಧೀರಜ್ ರೈ ಸಂಪಾಜೆ ಅವರಿಂದ ‘ಯಕ್ಷ-ಗಾನ-ಹಾಸ್ಯ ವೈಭವ’ ಹಾಗೂ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ತಂಡದಿಂದ ಭರತನಾಟ್ಯ.
-
ಏಪ್ರಿಲ್ 30: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ‘ಅನುಗ್ರಹ ಸಂದೇಶ’. ವಿದ್ವಾನ್ ವಾಗೀಶಾಚಾರ್ಯ ಗೊರೆಬಾಳ ಅವರಿಂದ ‘ನರಸಿಂಹ ಅವತಾರದ ಔಚಿತ್ಯ’ ಉಪನ್ಯಾಸ. ಸಂಜೆ ಪುತ್ತೂರು ಗಣೇಶ್ ಅವರಿಂದ ಸ್ಯಾಕ್ರೋಫೋನ್ ಕಛೇರಿ.
-
ಮೇ 1: ಬೆಂಗಳೂರಿನ ವಿದ್ವಾನ್ ರಾಜಕಮಲ್ ತಂಡದಿಂದ ಕೊಳಲುವಾದನ ಹಾಗೂ ಉಡುಪಿಯ ಲಕ್ಷ್ಮೀ ಗುರುರಾಜ್ ತಂಡದಿಂದ ‘ನೃತ್ಯ ನೀರಾಜನಂ’.
-
ಮೇ 2: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಿಂದ ‘ತ್ರಿಜನ್ಮ ಮೋಕ್ಷ’ ಯಕ್ಷಗಾನ ಬಯಲಾಟ ನಡೆಯಲಿದೆ.
-
ಏಪ್ರಿಲ್ 27 ರಿಂದ ಪ್ರತಿದಿನ ಬೆಳಿಗ್ಗೆ 6.30 ರಿಂದ ಸಂಜೆ 6.30 ರವರೆಗೆ ನಿರಂತರ ‘ಏಕಾದಶಿ ನಾಮ ಸಂಕೀರ್ತನೆ’ ಮತ್ತು ಭಜನಾ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಠದ ಪ್ರಕಟಣೆ ತಿಳಿಸಿದೆ.
