ಪೆರಿಯಶಾಂತಿ ಬಳಿ ರಸ್ತೆ ಬದಿ ಕಸ ಎಸೆದ ವಾಹನ ತಡೆದು ನಿಲ್ಲಿಸಿದ ಪರಿಸರ ಪ್ರೇಮಿ

kadaba times

ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ರಸ್ತೆ ಬದಿ ಕಸ ಎಸೆಯುತ್ತಿದ್ದ ಮಿನಿಗೂಡ್ಸ್ ವಾಹನ ಸವಾರರನ್ನು ತಡೆದ ಸಾರ್ವಜನಿಕರು, ಅವರಿಂದಲೇ ಕಸ ತೆರವುಗೊಳಿಸಿದ ಘಟನೆ ನಡೆದಿದೆ.

kadaba times
uniq

ನೆಲ್ಯಾಡಿ: ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕಾದವರೇ ಪರಿಸರ ಮಲಿನಗೊಳಿಸಲು ಮುಂದಾದಾಗ ಸಾರ್ವಜನಿಕರು ಎಚ್ಚೆತ್ತುಕೊಂಡ ಪ್ರಸಂಗವೊಂದು ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ನಡೆದಿದೆ. ಮಿನಿಗೂಡ್ಸ್ ವಾಹನವೊಂದರಲ್ಲಿ ಬಂದು ರಸ್ತೆ ಬದಿ ಕಸ ಎಸೆಯುತ್ತಿದ್ದವರನ್ನು ಸ್ಥಳೀಯರು ತಡೆದು, ಅವರಿಂದಲೇ ಕಸವನ್ನು ತೆರವುಗೊಳಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಏಪ್ರಿಲ್ 7ರಂದು ಬೆಳಿಗ್ಗೆ ಈ ಘಟನೆ ನಡೆದಿದೆ. ‘ಎನ್‌ಎಚ್‌ಎಐ ಆನ್ ಡ್ಯೂಟಿ’ (NHAI On Duty) ಎಂಬ ಸ್ಟಿಕ್ಕರ್ ಅಂಟಿಸಿಕೊಂಡಿದ್ದ ಮಿನಿಗೂಡ್ಸ್ ವಾಹನವೊಂದು ಪೆರಿಯಶಾಂತಿಯಿಂದ ಇಚ್ಲಂಪಾಡಿ ಕಡೆಗೆ ತೆರಳುವ ರಸ್ತೆ ಬದಿಯಲ್ಲಿ ಚೀಲವೊಂದರಲ್ಲಿ ತುಂಬಿದ್ದ ಕಸವನ್ನು ಎಸೆದು ಹೋಗಲು ಯತ್ನಿಸಿದೆ.

ಇದನ್ನು ಗಮನಿಸಿದ ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದ ಅಧ್ಯಕ್ಷರಾದ ಜಾನ್ಸನ್ ಕೆ.ಜೆ. ಅವರು ತಕ್ಷಣವೇ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ರಸ್ತೆ ಬದಿ ಕಸ ಎಸೆಯುವುದನ್ನು ತೀವ್ರವಾಗಿ ಆಕ್ಷೇಪಿಸಿದ ಅವರು, ಎಸೆದಿದ್ದ ಕಸವನ್ನು ಮರಳಿ ವಾಹನಕ್ಕೆ ತುಂಬಿಸುವಂತೆ ಆಗ್ರಹಿಸಿದರು. ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ವಾಹನದಲ್ಲಿದ್ದವರು ತಾವು ಎಸೆದಿದ್ದ ಕಸವನ್ನು ಅಲ್ಲಿಂದ ತೆರವುಗೊಳಿಸಿ ಕೊಂಡೊಯ್ದಿದ್ದಾರೆ.

kadaba times
kadaba times
ತ್ಯಾಜ್ಯದ ರಾಶಿಯಿಂದ ಹೈರಾಣಾದ ರಸ್ತೆ

ಪೆರಿಯಶಾಂತಿ-ಇಚ್ಲಂಪಾಡಿ ರಸ್ತೆಯು ಸದ್ಯ ತ್ಯಾಜ್ಯ ಎಸೆಯುವ ತಾಣವಾಗಿ ಮಾರ್ಪಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಯ ಎರಡೂ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಹಳೆಯ ಬಟ್ಟೆಗಳು ಹಾಗೂ ಇನ್ನಿತರ ಕೊಳಕು ವಸ್ತುಗಳ ರಾಶಿ ಬಿದ್ದಿದೆ. ಪ್ರವಾಸಿಗರು ಹಾಗೂ ಹೊರಗಿನಿಂದ ಬರುವವರು ನಿರ್ಜನ ಪ್ರದೇಶವೆಂದು ಭಾವಿಸಿ ಇಲ್ಲಿ ಕಸ ಸುರಿಯುತ್ತಿದ್ದಾರೆ.

“ಸುಂದರವಾದ ಪರಿಸರವನ್ನು ಮಲೀನಗೊಳಿಸುತ್ತಿರುವುದು ಖೇದಕರ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related Articles

Latest Articles