ಕಡಬ ಹಸಿ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನುಗಳು ಸಿಗುತ್ತಿಲ್ಲ-ಸಾರ್ವಜನಿಕರ ದೂರು

kadaba times

ಕಡಬದ ಹಸಿ ಮೀನು ಮಾರುಕಟ್ಟೆಯಲ್ಲಿ ಹಳಸಿದ ಮೀನು ಮಾರಾಟ ಮತ್ತು ದರ ವ್ಯತ್ಯಾಸದ ದೂರಿನ ಹಿನ್ನೆಲೆಯಲ್ಲಿ ಇಬ್ಬರು ವ್ಯಾಪಾರಿಗಳಿಗೆ ಪಟ್ಟಣ ಪಂಚಾಯತ್ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kadaba times
uniq

ಕಡಬ:  ಪಟ್ಟಣದ ಹಸಿ ಮೀನು ಮಾರುಕಟ್ಟೆಯಲ್ಲಿ ಹಳಸಿದ ಮೀನು ಮಾರಾಟ ಮಾಡುತ್ತಿರುವ ಹಾಗೂ ದರಪಟ್ಟಿಯಲ್ಲಿ ವ್ಯತ್ಯಾಸ ಎಸಗುತ್ತಿರುವ ದೂರಿನ ಹಿನ್ನೆಲೆಯಲ್ಲಿ, ಕಡಬ ಪಟ್ಟಣ ಪಂಚಾಯತ್ ಇಬ್ಬರು ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ. ಪಂಚಾಯತ್ ಕ್ರಮದ ವಿರುದ್ಧ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರಿನ ಹಿನ್ನೆಲೆ ಮತ್ತು ನೋಟಿಸ್ ಜಾರಿ

ಮಾರುಕಟ್ಟೆಯ ಸ್ಟಾಲ್ ಸಂಖ್ಯೆ 2ರ ಮಾಲೀಕ ಆದಂ ಸಾಹೇಬ್ ಹಾಗೂ ಸ್ಟಾಲ್ ಸಂಖ್ಯೆ 3ರ ಮಾಲೀಕ ಕೆ. ಎಂ. ಮ್ಯಾಥ್ಯು ಅವರು ತಾಜಾ ಮೀನುಗಳನ್ನು ಮಾರಾಟ ಮಾಡುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದವು. ವ್ಯಾಪಾರಿಗಳು ಮೀನುಗಳನ್ನು ಐಸ್‌ನಲ್ಲಿ ಹಾಕಿ ಎರಡು-ಮೂರು ದಿನಗಳ ಕಾಲ ದಾಸ್ತಾನು ಇರಿಸಿ, ನಂತರ ಮಾರಾಟ ಮಾಡುತ್ತಿದ್ದಾರೆ ಹಾಗೂ ದರಪಟ್ಟಿಯಲ್ಲಿ ಭಾರೀ ವ್ಯತ್ಯಾಸ ಮಾಡುತ್ತಾ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪಟ್ಟಣ ಪಂಚಾಯತ್‌ಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಇಬ್ಬರು ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಕೂಡಲೇ ಆಹಾರ ಇಲಾಖೆಯಿಂದ ಅಧಿಕೃತ ಪ್ರಮಾಣಪತ್ರ ಪಡೆಯಬೇಕು, ಪ್ರತಿದಿನದ ಮೀನಿನ ದರವನ್ನು ಸ್ಪಷ್ಟವಾಗಿ ಕಾಣುವಂತೆ ಬೋರ್ಡ್‌ನಲ್ಲಿ ಪ್ರದರ್ಶಿಸಬೇಕು. ಏಳು ದಿನಗಳ ಒಳಗಾಗಿ ಪಾಲನಾ ವರದಿಯನ್ನು ಸಲ್ಲಿಸಬೇಕು. ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳ ಆಕ್ರೋಶ

ಪಂಚಾಯತ್ ಅಧಿಕಾರಿಗಳ ಈ ದಿಢೀರ್ ಭೇಟಿ ಮತ್ತು ನೋಟಿಸ್ ಕ್ರಮವನ್ನು ಮೀನು ವ್ಯಾಪಾರಿಗಳು ಕಟುವಾಗಿ ಟೀಕಿಸಿದ್ದಾರೆ. “ಹಳಸಿದ ಮೀನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಯಾರೋ ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ಅಧಿಕಾರಿಗಳು ಏಕಪಕ್ಷೀಯವಾಗಿ ಕ್ರಮ ಕೈಗೊಂಡಿದ್ದಾರೆ” ಎಂದು ವರ್ತಕರು ದೂರಿದ್ದಾರೆ.

kadaba times
kadaba times

ಮೀನು ಹಳಸಿದೆ ಎನ್ನುವುದಾದರೆ ಮೊದಲು ಅದನ್ನು ಪ್ರಯೋಗಾಲಯಕ್ಕೆ (Lab Test) ಕಳುಹಿಸಿ ವರದಿ ನೀಡಲಿ. ಪುರಾವೆ ಇಲ್ಲದೆ ನೋಟಿಸ್ ನೀಡುವುದು ಸರಿಯಲ್ಲ.  ಹೊರಗಡೆಯಿಂದ ಬರುವ ಮೀನಿನ ದರ ದಿನದಿಂದ ದಿನಕ್ಕೆ ಏರಿಳಿತವಾಗುವುದರಿಂದ ನಿರಂತರವಾಗಿ ದರಪಟ್ಟಿ ಬದಲಿಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ವೀಡಿಯೋ ವೊಂದರಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಮೂಲಸೌಕರ್ಯದ ಕೊರತೆ: ಲಕ್ಷಾಂತರ ರೂಪಾಯಿ ನೀಡಿ ಹರಾಜು ಪಡೆದರೂ ಮಾರುಕಟ್ಟೆಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಹಿಂಭಾಗದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಗಬ್ಬು ನಾರುತ್ತಿದೆ. ಅಧಿಕಾರಿಗಳು ಮೊದಲು ಸ್ವಚ್ಛತೆಯತ್ತ ಗಮನಹರಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ .

ಸಾರ್ವಜನಿಕರ ಆರೋಗ್ಯ ಮತ್ತು ವ್ಯಾಪಾರಿಗಳ ಹಿತರಕ್ಷಣೆಯ ನಡುವಿನ ಈ ಸಮರ ಈಗ ಕಡಬದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಪಂಚಾಯತ್ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Related Articles

Latest Articles