
ಕಡಬ ತಾಲೂಕಿನಾದ್ಯಂತ ಗುರುವಾರ ಸಂಜೆ ಭಾರೀ ಗಾಳಿ-ಮಳೆಯಾಗಿದ್ದು, ಆಲಂಕಾರಿನಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ವಿದ್ಯುತ್ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ಹಲವೆಡೆ ಕತ್ತಲೆ ಆವರಿಸಿದೆ.


ಕಡಬ: ತಾಲೂಕಿನಾದ್ಯಂತ ಗುರುವಾರ ಸಂಜೆ ಗುಡುಗು, ಸಿಡಿಲು ಸಹಿತ ಭಾರೀ ಗಾಳಿ-ಮಳೆ ಅಪ್ಪಳಿಸಿದ್ದು, ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ತೀವ್ರತೆಗೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ಕಂಬಗಳು ಹಾಗೂ ತಂತಿಗಳು ತುಂಡಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಮಳೆಯ ಪ್ರಮಾಣ ಸಾಧಾರಣವಾಗಿದ್ದರೂ, ಸಿಡಿಲಿನ ಅಬ್ಬರ ಮಾತ್ರ ಜನರನ್ನು ಬೆಚ್ಚಿಬೀಳಿಸಿತ್ತು. ಆಲಂಕಾರು ಗ್ರಾಮದಲ್ಲಿ ಅನಿರೀಕ್ಷಿತವಾಗಿ ಮನೆಯೊಂದರ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಮರಕ್ಕೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ತೆಂಗಿನ ಮರ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಗಾಳಿ-ಮಳೆಗೆ ಮರಗಳು ವಿದ್ಯುತ್ ಲೈನ್ಗಳ ಮೇಲೆ ಬಿದ್ದ ಪರಿಣಾಮ ಕಡಬ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿಗಳು ಹಾನಿಗೊಳಗಾದ ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ದೀರ್ಘಕಾಲದ ಬಳಿಕ ಸುರಿದ ಈ ಮಳೆ ಭೂಮಿಗೆ ತಂಪು ನೀಡಿದ್ದರೂ, ಬಿರುಗಾಳಿ ಮತ್ತು ಸಿಡಿಲು ಅವಾಂತರ ತಂದೊಡ್ಡಿದೆ.
