ಕುಕ್ಕೆ ಸುಬ್ರಹ್ಮಣ್ಯ: ದಾರಿದೀಪ’ಕ್ಕೆ ಗ್ರಹಣ: ಕುಮಾರಧಾರ-ಕುಲ್ಕುಂದ ರಸ್ತೆಯಲ್ಲಿ ಮತ್ತೆ ಕತ್ತಲೆ

kadaba times

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಮತ್ತು ಕುಲ್ಕುಂದ ನಡುವೆ ಅಳವಡಿಸಲಾದ ದಾರಿದೀಪಗಳು ನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿವೆ. ಕಾಡುಪ್ರಾಣಿಗಳ ಭಯ ಮತ್ತು ಅಪಘಾತದ ಆತಂಕದಲ್ಲಿರುವ ಭಕ್ತರು ಹಾಗೂ ಸ್ಥಳೀಯರ ಸಮಸ್ಯೆ ಕುರಿತಾದ ವಿಶೇಷ ವರದಿ.

kadaba times
uniq

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕ್ಷೇತ್ರಕ್ಕೆ ಬರುವ ಭಕ್ತರು ಹಾಗೂ ಸ್ಥಳೀಯರ ಪಾಲಿಗೆ ದಶಕಗಳ ಬೇಡಿಕೆಯಾಗಿದ್ದ ಕುಮಾರಧಾರ-ಕುಲ್ಕುಂದ ಸಂಪರ್ಕ ರಸ್ತೆಯ ದಾರಿದೀಪಗಳು, ಈಗ ಸಮರ್ಪಕ ನಿರ್ವಹಣೆಯಿಲ್ಲದೆ ಮೂಲೆಗುಂಪಾಗಿವೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌  ವತಿಯಿಂದ  ಅಳವಡಿಸಲಾಗಿದ್ದ ಹಲವು ದಾರಿದೀಪಗಳ ಪೈಕಿ ಹೆಚ್ಚಿನವು ಈಗ ಕಾರ್ಯನಿರ್ವಹಿಸುತ್ತಿಲ್ಲ.

ಹೆಸರಿಗಷ್ಟೇ ದೀಪ, ಕತ್ತಲಲ್ಲಿ ರಸ್ತೆ: ಪಂಚಾಯತ್ ವತಿಯಿಂದ ಅಳವಡಿಸಲಾದ ಒಟ್ಟು 10 ದಾರಿದೀಪಗಳ ಪೈಕಿ ಸದ್ಯಕ್ಕೆ ಕೇವಲ ಮೂರು ದೀಪಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಉರಿಯುತ್ತಿವೆ.  ಉಳಿದವುಗಳಲ್ಲಿ ಮೂರು ದೀಪಗಳು ಸಾವು-ಬದುಕಿನ ನಡುವೆ ಹೋರಾಡುವಂತೆ ‘ಮಿಣಿ ಮಿಣಿ’ ಎನ್ನುತ್ತಿದ್ದರೆ , ಮತ್ತೊಂದು ವಿದ್ಯುತ್ ಕಂಬದಲ್ಲಿ ದೀಪದ ಕೋಲು ಮಾತ್ರ ಕಾಣಿಸುತ್ತಿದ್ದು, ದೀಪವೇ ಇಲ್ಲದಂತಾಗಿದೆ.

ಅಪಘಾತ ಹಾಗೂ ಕಾಡುಪ್ರಾಣಿಗಳ ಭೀತಿ: ಈ ರಸ್ತೆಯು ಕುಲ್ಕುಂದದಿಂದ ಸುಬ್ರಹ್ಮಣ್ಯ ಕುಮಾರಧಾರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹಾದಿಯಾಗಿದ್ದು, ನಿತ್ಯ ಸಾವಿರಾರು ಭಕ್ತರು ಹಾಗೂ ವಾಹನ ಸವಾರರು ಇಲ್ಲಿ ಸಂಚರಿಸುತ್ತಾರೆ. ಕುಮಾರಧಾರ ಭಾಗದಲ್ಲಿ ಅಪಾಯಕಾರಿ ತಿರುವುಗಳಿದ್ದು, ದಾರಿದೀಪಗಳಿಲ್ಲದೆ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

kadaba times
kadaba times

ಅಲ್ಲದೆ, ಈ ಭಾಗದಲ್ಲಿ ನಿತ್ಯ ಕಾಡುಪ್ರಾಣಿಯಾದ ಕಡವೆಗಳ ಸಂಚಾರ ಹೆಚ್ಚಾಗಿರುತ್ತದೆ. ಈ ಹಿಂದೆಯೇ ಕಡವೆ ಅಡ್ಡ ಬಂದು ಹಲವು ಅಪಘಾತಗಳು ಸಂಭವಿಸಿವೆ. ಈಗ ದಾರಿದೀಪಗಳು ಕೈಕೊಟ್ಟಿರುವುದು ವಾಹನ ಸವಾರರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಕತ್ತಲಲ್ಲಿ ಪ್ರಾಣಿಗಳು ರಸ್ತೆಗೆ ಬರುವುದು ತಿಳಿಯದೆ ದೊಡ್ಡ ಅನಾಹುತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.

ಸಾರ್ವಜನಿಕರ ಆಗ್ರಹ:  ದಾರಿದೀಪಗಳು ಒಂದೇ ವರ್ಷದಲ್ಲಿ ಈ ಸ್ಥಿತಿಗೆ ತಲುಪಿರುವುದು ಗ್ರಾಮ ಪಂಚಾಯತ್‌ನ ನಿರ್ವಹಣಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಳವಡಿಸಿದ ದೀಪಗಳು ಉರಿಯದಿದ್ದರೆ ಯಾರಿಗೆ ಲಾಭ?” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಸ್ಥಗಿತಗೊಂಡಿರುವ ದಾರಿದೀಪಗಳನ್ನು ದುರಸ್ತಿಗೊಳಿಸಬೇಕು ಮತ್ತು ಭಕ್ತರ ಹಾಗೂ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಈ ಭಾಗದ ಜನರ ಆಶಯವಾಗಿದೆ.

Related Articles

Latest Articles