
ಕಡಬ ತಾಲೂಕಿನ ಕುಂತೂರಿನಲ್ಲಿ ಅಜ್ಜನಿಗೆ ಬೈದಿದ್ದನ್ನು ಪ್ರಶ್ನಿಸಿದ ಅಬ್ದುಲ್ ರಹಿಮಾನ್ ಎಂಬ ಯುವಕನ ಮೇಲೆ ರಾಝಿಕ್, ಖಾದರ್ ಮತ್ತು ರೌಫ್ ತಂಡದಿಂದ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆದಿದೆ.


ಕಡಬ: ಹಳೆಯ ವಿಚಾರಕ್ಕೆ ಸಂಬಂಧಿಸಿ ಅಜ್ಜನಿಗೆ ಬೈದಿದ್ದನ್ನು ಪ್ರಶ್ನಿಸಿದ ಯುವಕನೋರ್ವನಿಗೆ ತಂಡವೊಂದು ಕಬ್ಬಿಣದ ರಾಡ್ ಹಾಗೂ ಕೈಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಕುಂತೂರು ಮಸೀದಿ ಬಳಿ ಗುರುವಾರ ಸಂಜೆ ನಡೆದಿದೆ.
ಪೆರಾಬೆ ಗ್ರಾಮದ ಕೊಚಕಟ್ಟೆ ನಿವಾಸಿ ಕೆ.ಎ. ಅಬ್ದುಲ್ ರಹಿಮಾನ್ ಯಾನೆ ಅಮಾನ್ (24) ಹಲ್ಲೆಗೊಳಗಾದ ಯುವಕ. ಕುಂತೂರಿನ ರಾಝಿಕ್, ಖಾದರ್ ಹಾಗೂ ರೌಫ್ ಎಂಬವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಸುಮಾರು 10 ದಿನಗಳ ಹಿಂದೆ ಕುಂತೂರಿನ ಹೋಟೆಲ್ ಒಂದರ ಎದುರು ಆರೋಪಿ ರಾಝಿಕ್ ಎಂಬಾತನು ಅಬ್ದುಲ್ ರಹಿಮಾನ್ ಅವರ ಅಜ್ಜ ಬಿ.ಎ. ಅಬೂಬಕ್ಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ಎನ್ನಲಾಗಿದೆ. ಈ ಬಗ್ಗೆ ಏಪ್ರಿಲ್ 23ರಂದು ಸಂಜೆ ರಹಿಮಾನ್ ಅವರು ರಾಝಿಕ್ನನ್ನು ಪ್ರಶ್ನಿಸಿದಾಗ, ಆತ ಮತ್ತೆ ಬೈದು ಅಲ್ಲಿಂದ ತೆರಳಿದ್ದ.


ಅದೇ ದಿನ ಸಂಜೆ ಸುಮಾರು 6:45 ಗಂಟೆಗೆ ಅಬ್ದುಲ್ ರಹಿಮಾನ್ ಕುಂತೂರು ಮಸೀದಿ ಬಳಿ ಇದ್ದಾಗ ಅಲ್ಲಿಗೆ ಬಂದ ರಾಝಿಕ್, ರೌಫ್ ಮತ್ತು ಖಾದರ್ ತಂಡವು ಗಲಾಟೆ ಆರಂಭಿಸಿದೆ. ಈ ವೇಳೆ ಆರೋಪಿ ಖಾದರ್ ಕಬ್ಬಿಣದ ರಾಡ್ನಿಂದ ರಹಿಮಾನ್ ಅವರ ಭುಜಕ್ಕೆ ಹೊಡೆದರೆ, ರಾಝಿಕ್ ಮತ್ತು ರೌಫ್ ಕೈಗಳಿಂದ ಬೆನ್ನಿಗೆ ಗುದ್ದಿ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳದಲ್ಲಿದ್ದ ರಿಯಾಜ್, ತಾಜುದ್ದೀನ್ ಹಾಗೂ ಇತರರು ಗಲಾಟೆ ಬಿಡಿಸಿದ್ದು, ಹಲ್ಲೆಗೆ ಬಳಸಿದ ರಾಡ್ ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 115(2), 118(1), 352, 351(1) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
