ಡಾಂಬರು ಅಭಾವದಿಂದ ಕಡಬ-ಪಂಜ ರಸ್ತೆ ಕಾಮಗಾರಿ ಸ್ಥಗಿತ

kadaba times

ಕಡಬ-ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿ  ಡಾಂಬರು ಕೊರತೆಯ ನೆಪದಲ್ಲಿ ಸ್ಥಗಿತಗೊಂಡಿದೆ. 2 ಕೋಟಿ ರೂ. ಅನುದಾನವಿದ್ದರೂ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ರಸ್ತೆ ಅವ್ಯವಸ್ಥೆ ಮುಂದುವರಿದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

kadaba times
uniq

ಕಡಬ: ಕ್ಷೇತ್ರದ ಪ್ರಮುಖ ಸಂಪರ್ಕ ರಸ್ತೆಯಾದ ಕಡಬ-ಪಂಜ ರಸ್ತೆಯ ಅಭಿವೃದ್ಧಿ ಕಾಮಗಾರಿ ಇದೀಗ ಹಳ್ಳ ಹಿಡಿದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಡಾಂಬರು  ಕೊರತೆಯ ನೆಪವೊಡ್ಡಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದು  ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅನುದಾನವಿದ್ದರೂ ಸಾಗದ ಕೆಲಸ

ರಸ್ತೆ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕಡಬದಿಂದ ಕಲ್ಲಂತಡ್ಕದವರೆಗೆ ಹೆಚ್ಚು ಹಾಳಾಗಿದ್ದ ಮೂರು ಕಡೆಗಳಲ್ಲಿ ರಸ್ತೆ ಎತ್ತರಿಸಿ ಕಾಂಕ್ರೀಟ್ ಹಾಕಲಾಗಿತ್ತು. ಇದೀಗ ಎರಡನೇ ಹಂತದ ಕಾಮಗಾರಿಗಾಗಿ ಮತ್ತೊಂದು 1 ಕೋಟಿ ರೂ. ಮಂಜೂರಾಗಿದೆ. ಒಟ್ಟು 2 ಕೋಟಿ ರೂ. ಅನುದಾನ ಲಭ್ಯವಿದ್ದರೂ ಗುತ್ತಿಗೆದಾರನ ನಿರಾಸಕ್ತಿ ಮತ್ತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ಕಾಮಗಾರಿ ಪ್ರಗತಿ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರದಿಂದ 1 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಅನುದಾನವಿದ್ದರೂ, ಗುತ್ತಿಗೆದಾರರು ಸರಿಯಾದ ಸಮಯಕ್ಕೆ ಕೆಲಸ ಮಾಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಪ್ರತಿ ತಿಂಗಳು ಸುಮಾರು 28.26 ಲಕ್ಷ ರೂ.ಗಳಷ್ಟು ಪ್ರಗತಿ ಸಾಧಿಸಬೇಕೆಂದು ಇಲಾಖೆ ಸೂಚಿಸಿದ್ದರೂ, ಪ್ರಸ್ತುತ ಕೆಲಸ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರ ಸಂಕಷ್ಟವನ್ನು ಹೆಚ್ಚಿಸಿದೆ.

ಡಾಮಾರು ಕೊರತೆ ನೆಪ:

ಡಾಮಾರು ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸುಳ್ಯ ವಿಭಾಗದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೋಪಾಲ್ ಅವರು ಮಾಹಿತಿ ನೀಡಿದ್ದಾರೆ.  ಬೆಂಗಳೂರು ಮೂಲದ ಗುತ್ತಿಗೆದಾರನಿಗೆ  ಜುಲೈ 2025 ರವರೆಗೆ ಕಾಮಗಾರಿ ಮುಗಿಸಲು ಅವಧಿ ಇದ್ದರೂ, ಸದ್ಯ ಕೆಲಸ ಸ್ಥಗಿತಗೊಂಡಿರುವುದರಿಂದ ಇಲಾಖೆಯಿಂದ ನೋಟಿಸ್ ನೀಡಲು ಕ್ರಮ ಕೈಗೊಳ್ಳಗುವುದು ಎಂದಿದ್ದಾರೆ.

kadaba times
kadaba times

ಗುತ್ತಿಗೆದಾರರಿಗೆ ನೀಡಲಾದ ಅಧಿಕೃತ ಪಟ್ಟಿಯಲ್ಲಿ (Bill of Quantities) ರಸ್ತೆಯ ಸುಧಾರಣೆಯ ಜೊತೆಗೆ ಈ ಕೆಳಗಿನ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕೆಂದು ಉಲ್ಲೇಖಿಸಲಾಗಿದೆ:ಚರಂಡಿ ಮತ್ತು ಮೋರಿಗಳ ನಿರ್ವಹಣೆ: ಸುಮಾರು 800 ರಷ್ಟು ಚರಂಡಿ ಸ್ವಚ್ಛಗೊಳಿಸುವಿಕೆ ಮತ್ತು 4 ಹ್ಯೂಮ್ ಪೈಪ್ ಮೋರಿಗಳ ದುರಸ್ತಿ ಕಾರ್ಯವನ್ನು ನಡೆಸಬೇಕು. ರಸ್ತೆಯ ಆಳವಾದ ಮತ್ತು ಮೇಲ್ಪದರದ ಗುಂಡಿಗಳನ್ನು ಎಸ್‌ಡಿಬಿಸಿ (SDBC) ಮಿಶ್ರಣದಿಂದ ಮುಚ್ಚಬೇಕೆಂದು ಸೂಚಿಸಲಾಗಿದೆ.ವಾಹನ ಸವಾರರ ಸುರಕ್ಷತೆಗಾಗಿ 16 ಟ್ರಾಫಿಕ್ ಸೈನ್ ಬೋರ್ಡ್‌ಗಳು ಮತ್ತು 3 ಮಾರ್ಗದರ್ಶನ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.

ಈ ತಿಂಗಳ ಕೊನೆಯೊಳಗೆ ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ತನಕದ ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದರು. ಆದರೆ ಈಗ ಶಾಸಕರ ಮಾತಿಗೂ ಬೆಲೆ ಇಲ್ಲದಂತಾಗಿದೆ. ಕಾಮಗಾರಿಯ ಆದೇಶದಲ್ಲಿ ರಸ್ತೆಯ ಎರಡೂ ಕಡೆ ಚರಂಡಿ ಸರಿಪಡಿಸಲು ಮತ್ತು ಮೋರಿ ಅಳವಡಿಸಲು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಮಳೆಗಾಲ ಆರಂಭವಾಗುವ ಮೊದಲು ರಸ್ತೆಯ ಚರಂಡಿ ಮತ್ತು ಮೋರಿಗಳ ಕೆಲಸ ಮುಗಿಯದಿದ್ದರೆ, ರಸ್ತೆ ಮತ್ತಷ್ಟು ಹಾಳಾಗುವ ಭೀತಿ ಎದುರಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related Articles

Latest Articles