ಕ್ಷುಲ್ಲಕ ಕಾರಣಕ್ಕೆ ಜಗಳ: ಪತ್ನಿಯ ಭೀಕರ ಕೊಲೆಗೈದು ಪತಿ ಆತ್ಮಹತ್ಯೆಗೆ ಯತ್ನ

ರಬ್ಬರ್ ತೋಟದಲ್ಲಿ ಬಿದ್ದಿತ್ತು ಮೃತದೇಹ

kadaba times

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಗೋಳ್ತಿಲದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಸಾವಿತ್ರಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಬೈರಪ್ಪ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ನಡುವೆ ಉಂಟಾದ ಜಗಳವೊಂದು ವಿಕೋಪಕ್ಕೆ ತಿರುಗಿ, ಪತಿಯೇ ಪತ್ನಿಯನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ಅರಿಯಡ್ಕ ಗ್ರಾಮದ ಗೋಳ್ತಿಲ ಎಂಬಲ್ಲಿ ಮಾ. 20ರಂದು ಬೆಳಿಗ್ಗೆ ನಡೆದಿದೆ. ಪತ್ನಿಯನ್ನು ಹತ್ಯೆಗೈದ ಬಳಿಕ ಆರೋಪಿ ಪತಿಯೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿದ್ದಾನೆ.

ಕಡಬ ತಾಲೂಕಿನ ಕುಮಾರಮಂಗಲ ನಿವಾಸಿ ಸಾವಿತ್ರಿ (42ವ) ಕೊಲೆಯಾದ ದುರ್ದೈವಿ. ಆಕೆಯ ಪತಿ, ಸುಳ್ಯ ಎರ್ಮೆಟ್ಟಿ ನಿವಾಸಿ ಪುರುಷೋತ್ತಮ ಯಾನೆ ಬೈರಪ್ಪ ಕೊಲೆ ಆರೋಪಿಯಾಗಿದ್ದಾನೆ. ಈ ದಂಪತಿಗಳು ಅರಿಯಡ್ಕ ಗ್ರಾಮದ ಗೋಳ್ತಿಲದಲ್ಲಿರುವ ಚೈತನ್ಯ ಎಂಬವರ ಕೃಷಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿನ ತೋಟದ ಮನೆಯಲ್ಲೇ ವಾಸವಾಗಿದ್ದರು.

ಮಾ. 20ರಂದು ಬೆಳಿಗ್ಗೆ ಇಬ್ಬರ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಆಕ್ರೋಶಗೊಂಡ ಬೈರಪ್ಪ, ಮನೆಯಲ್ಲಿದ್ದ ಚೂರಿಯಿಂದ ಪತ್ನಿ ಸಾವಿತ್ರಿಗೆ ಮನಸೋಇಚ್ಛೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಾವಿತ್ರಿ ಅವರು ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರಾದರೂ, ರಬ್ಬರ್ ತೋಟದ ಮಣ್ಣಿನ ರಸ್ತೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

kadaba times
kadaba times

ಆರೋಪಿಯಿಂದ ಆತ್ಮಹತ್ಯೆ ಯತ್ನ: ಪತ್ನಿಯನ್ನು ಕೊಂದ ಬಳಿಕ ಪಶ್ಚಾತ್ತಾಪಕ್ಕೊಳಗಾದವನಂತೆ ವರ್ತಿಸಿದ ಬೈರಪ್ಪ, ತಾನೂ ಅದೇ ಚೂರಿಯಿಂದ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆತನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಭೇಟಿ ಮತ್ತು ತನಿಖೆ: ಸ್ಥಳೀಯರ ಮಾಹಿತಿಯ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಸಾವಿತ್ರಿಯವರ ತಂದೆ ತಿಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ವೈವಾಹಿಕ ಕಲಹವೇ ಈ ಘಟನೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

Related Articles

Latest Articles