
ಸುಳ್ಯದ ಕೊಡಿಯಾಲ್ಬೈಲ್ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜು (42) ಇಂದು ಶ್ರೀರಾಂ ಪೇಟೆ ಬಳಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.


ಸುಳ್ಯ: ವಿದ್ಯಾಕಾಶಿ ಸುಳ್ಯದಲ್ಲಿ ಇಂದು ಮಧ್ಯಾಹ್ನ ಆಘಾತಕಾರಿ ಘಟನೆಯೊಂದು ನಡೆದಿದೆ. ಸುಳ್ಯದ ಕೊಡಿಯಾಲ್ಬೈಲ್ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜು (42) ಅವರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸದಾ ನಗುಮುಖದಿಂದ ಇರುತ್ತಿದ್ದ ಮೇಷ್ಟ್ರ ಅಕಾಲಿಕ ವಿದಾಯ ವಿದ್ಯಾರ್ಥಿ ವಲಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ.
ನಗುನಗುತಲೇ ಮಾತಾಡಿದ್ದ ಮೇಷ್ಟ್ರು ಇನ್ನಿಲ್ಲ…
ಮೂಲತಃ ಕೆ.ಆರ್. ನಗರದವರಾದ ಮಂಜು ಅವರು ಕಳೆದ ಎರಡು ವರ್ಷಗಳಿಂದ ಸುಳ್ಯದ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮಧ್ಯಾಹ್ನದವರೆಗೂ ಸಹೋದ್ಯೋಗಿಗಳ ಜೊತೆ ಲವಲವಿಕೆಯಿಂದಲೇ ಮಾತನಾಡಿದ್ದ ಅವರು, “ಸ್ವಲ್ಪ ಹುಷಾರಿಲ್ಲ, ವಿಶ್ರಾಂತಿ ಪಡೆದು ಬರುತ್ತೇನೆ” ಎಂದು ಹೇಳಿ ಮನೆಗೆ ತೆರಳಿದ್ದರು.


ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮನೆಯಿಂದ ಔಷಧಿಗಾಗಿ ಮೆಡಿಕಲ್ ಸ್ಟೋರ್ಗೆ ಬಂದಿದ್ದ ಸಂದರ್ಭದಲ್ಲಿ ಶ್ರೀರಾಂ ಪೇಟೆಯ ಬಳಿ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ನೆಚ್ಚಿನ ಗುರು
ಆರಂಭದಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಇವರು, ಬಳಿಕ ಪದವಿ ಕಾಲೇಜಿಗೆ ಬಡ್ತಿ ಪಡೆದಿದ್ದರು. ಕನ್ನಡ ಭಾಷೆಯ ಮೇಲಿನ ಅತೀವ ಪ್ರೀತಿ ಹಾಗೂ ವಿದ್ಯಾರ್ಥಿಗಳೊಂದಿಗಿನ ಅವರ ಒಡನಾಟ ಅಪಾರವಾಗಿತ್ತು. ನೆಚ್ಚಿನ ಗುರುಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜಿನ ವಿದ್ಯಾರ್ಥಿಗಳು ದಿಕ್ಕುತೋಚದಂತಾಗಿದ್ದಾರೆ. ಕೇವಲ 42ನೇ ವಯಸ್ಸಿನಲ್ಲಿಯೇ ಈ ಲೋಕವನ್ನು ಅಗಲಿದ ಮಂಜು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಶೋಕ ವ್ಯಕ್ತಪಡಿಸಿದ್ದಾರೆ.
