
ಪುತ್ತೂರಿನ ಸಂಟ್ಯಾರ್ ಬಳಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ಸರಣಿ ಅಪಘಾತ ಎಸಗಿದ್ದು, ವಾಹನ ಮಾಲೀಕಿ ಹಾಗೂ ಬಾಲಕನ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಪ್ರಾಪ್ತರಿಗೆ ವಾಹನ ನೀಡಿದರೆ ಆಗುವ ಕಾನೂನು ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.


ಸಾರ್ವಜನಿಕ ರಸ್ತೆಯಲ್ಲಿ ಅಪ್ರಾಪ್ತ ವಯಸ್ಕನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಗಂಭೀರ ಆರೋಪದ ಮೇಲೆ ವಾಹನ ಮಾಲೀಕಿ ಹಾಗೂ ಬಾಲಕನ ತಾಯಿಯ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.12ರಂದು ಸಂಜೆ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಸಂಟ್ಯಾರ್ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಅಪಘಾತವೆಸಗಿದ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ, ಸ್ಥಳೀಯ ಯುವಕರ ತಂಡ ಬೆನ್ನಟ್ಟಿ ಪೆರಿಗೇರಿ ಸಮೀಪ ಕಾರನ್ನು ತಡೆಹಿಡಿದಿದ್ದಾರೆ.
ಈ ಅಪಘಾತದಲ್ಲಿ ಬೈಕ್ ಸವಾರ ಕಾರ್ತಿಕ್ ಹಾಗೂ ಸಹಸವಾರ ಬಂಟ್ವಾಳ ನಿವಾಸಿ ರವಿ ಬಿ. (27) ಅವರು ಗಾಯಗೊಂಡಿದ್ದಾರೆ. ಗಾಯಾಳು ರವಿ ಬಿ. ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಾಗ, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಅಪ್ರಾಪ್ತ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾರಿನ ಮಾಲೀಕಿ, ಪುತ್ತೂರು ನಿವಾಸಿ ಕೆ.ಎ. ಮಮತಾಜ್ (42) ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹೆತ್ತವರ ಜವಾಬ್ದಾರಿ:
ಅನೇಕ ಪೋಷಕರು ತಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ವಾಹನ ಚಲಾಯಿಸುವುದನ್ನು ನೋಡಿ ಹೆಮ್ಮೆ ಪಡುತ್ತಾರೆ. ಆದರೆ, ಈ “ಸಂಭ್ರಮ” ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದನ್ನು ಮರೆಯಬಾರದು.ಅಪ್ರಾಪ್ತರಿಗೆ ವಾಹನ ನೀಡುವುದು ಕಾನೂನುಬಾಹಿರ ಮಾತ್ರವಲ್ಲದೆ, ಇತರರ ಜೀವಕ್ಕೆ ಅಪಾಯ ತಂದೊಡ್ಡುವ ಕೃತ್ಯವಾಗಿದೆ.ರಸ್ತೆಯ ನಿಯಮಗಳ ಅರಿವಿಲ್ಲದ ಮಕ್ಕಳು ಗಾಬರಿಯಲ್ಲಿ ಅನಾಹುತ ಎಸಗುವ ಸಾಧ್ಯತೆ ಹೆಚ್ಚಿರುತ್ತದೆ.
ಅಪ್ರಾಪ್ತರು ವಾಹನ ಓಡಿಸಿದರೆ ಕಟ್ಟುನಿಟ್ಟಿನ ಕ್ರಮಗಳು:
ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯ ಪ್ರಕಾರ, ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ


-
ಪೋಷಕರಿಗೆ ಶಿಕ್ಷೆ: ವಾಹನದ ಮಾಲೀಕ ಅಥವಾ ಪೋಷಕರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹25,000 ದಂಡ ವಿಧಿಸಬಹುದು.
-
ವಾಹನ ನೋಂದಣಿ ರದ್ದು: ಅಪಘಾತದಲ್ಲಿ ಭಾಗಿಯಾದ ವಾಹನದ ನೋಂದಣಿಯನ್ನು (Registration) 12 ತಿಂಗಳ ಅವಧಿಗೆ ರದ್ದುಗೊಳಿಸಲಾಗುತ್ತದೆ.
-
ಲೈಸೆನ್ಸ್ ನಿಷೇಧ: ತಪ್ಪು ಮಾಡಿದ ಅಪ್ರಾಪ್ತ ವಯಸ್ಕನಿಗೆ 25 ವರ್ಷ ತುಂಬುವವರೆಗೆ ಚಾಲನಾ ಪರವಾನಗಿ (Driving License) ಪಡೆಯಲು ಅವಕಾಶ ಇರುವುದಿಲ್ಲ.
“ಮಕ್ಕಳ ಕೈಗೆ ವಾಹನ ನೀಡುವುದು ನಿಮ್ಮನ್ನು ಜೈಲು ಪಾಲಾಗಿಸಬಹುದು. ಅಪಘಾತವಾದರೆ ಕೇವಲ ದಂಡ ಮಾತ್ರವಲ್ಲದೆ, ಜೀವಹಾನಿಯ ಹೊಣೆಯನ್ನೂ ಹೊರಬೇಕಾಗುತ್ತದೆ.”
