
ಮಂಗಳೂರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ವೀಡಿಯೋ ವೈರಲ್ ಮಾಡಿದ ಸ್ಟೀವನ್ ಮತ್ತು ಅವಿಲ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು.


ಮಂಗಳೂರು: ರೈಲ್ವೇ ಟ್ರ್ಯಾಕ್ ಬಳಿ ಕುಳಿತು ಮಾತನಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆಯನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಮಂಗಳೂರಿನ ಬಾಬುಗುಡ್ಡೆಯಲ್ಲಿ ನಡೆದಿದೆ.
ಫೆ.23 ರ ಸಂಜೆ 14 ವರ್ಷದ ಬಾಲಕ ಮತ್ತು ಆತನ ಸ್ನೇಹಿತೆ ರೈಲ್ವೇ ಟ್ರ್ಯಾಕ್ನಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಾದ ಸ್ಟೀವನ್ ಮೊಂತೆರೋ ಮತ್ತು ಆತನ ಮಗ ಅವಿಲ್ ಎಂಬುವವರು ಮೊಬೈಲ್ನಲ್ಲಿ ವೀಡಿಯೋ ಮಾಡುತ್ತಾ ಅಲ್ಲಿಗೆ ಬಂದಿದ್ದಾರೆ.
“ನೀವಿಲ್ಲಿ ಕಿಸ್ ಮಾಡುತ್ತಿದ್ದೀರಾ? ನಾನು ಇದನ್ನು ಫೇಸ್ಬುಕ್ನಲ್ಲಿ ಹಾಕುತ್ತೇನೆ” ಎಂದು ಬೆದರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಅಲ್ಲಿಂದ ತೆರಳಿದ್ದು, ಬಾಲಕನನ್ನು ತಡೆದು ನಿಲ್ಲಿಸಿದ ಆರೋಪಿಗಳು, ಆತನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದಾರೆ.


ಜಾತಿ ನಿಂದನೆ ಮತ್ತು ಬೆದರಿಕೆ: ಬಾಲಕನ ತಂದೆ ನೀಡಿರುವ ದೂರಿನ ಪ್ರಕಾರ, ಆರೋಪಿ ಸ್ಟೀವನ್ ಮೊಂತೆರೋಗೆ ತಾವು ಪರಿಶಿಷ್ಟ ಜಾತಿ (ಬಾಕುಡ) ಯವರೆಂದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ್ದಾರೆ. “ಇನ್ನೊಮ್ಮೆ ಈ ಕಡೆ ಬಂದರೆ ನಿನ್ನ ಕೈಕಾಲು ಮುರಿಯುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಲ್ಲದೆ, ಘಟನೆಯ ವೀಡಿಯೋವನ್ನು ವಾಟ್ಸಾಪ್ನಲ್ಲಿ ವೈರಲ್ ಮಾಡಿದ್ದಾರೆ
ಈ ಘಟನೆ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ BNS ಕಾಯ್ದೆಯ ವಿವಿಧ ಸೆಕ್ಷನ್ಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Act) ಪ್ರಕರಣ ದಾಖಲಾಗಿದೆ.
