
ಕಡಬ ಪೊಲೀಸ್ ಠಾಣೆಯಲ್ಲಿ ಇಂದು ನಡೆದ ಹುಂಜಗಳ ಹರಾಜಿನಲ್ಲಿ ಮೂರು ಕೋಳಿಗಳು 1,000 ರೂ.ಗೆ ಮಾರಾಟವಾಗಿವೆ. ಆದರೆ ಇವು ಅಂಕದ ಕೋಳಿಗಳಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.


ಕಡಬ: ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿ ಪೊಲೀಸರು ವಶಪಡಿಸಿಕೊಂಡಿದ್ದ ಮೂರು ಹುಂಜಗಳ ಬಹಿರಂಗ ಹರಾಜು ಪ್ರಕ್ರಿಯೆ ಇಂದು ಕಡಬ ಪೊಲೀಸ್ ಠಾಣಾ ಆವರಣದಲ್ಲಿ ನಡೆಯಿತು.
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೋಳಿ ಅಂಕ ಮತ್ತು ಜೂಜಾಟದ ಪ್ರಕರಣಕ್ಕೆ (ಅಪರಾಧ ಕ್ರಮಾಂಕ: 16/2026) ಸಂಬಂಧಿಸಿದಂತೆ ಒಟ್ಟು 3 ಹುಂಜಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿತ್ತು.


ಮಾನ್ಯ ನ್ಯಾಯಾಲಯದ ಆದೇಶದಂತೆ ಇಂದು ಬೆಳಿಗ್ಗೆ 10 ಗಂಟೆಗೆ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಏರ್ಪಡಿಸಲಾಗಿತ್ತು. ಮರ್ದಾಳ ಗ್ರಾಮದ ಮೂವರು ವ್ಯಕ್ತಿಗಳು ಈ ಹರಾಜಿನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಮೂರು ಹುಂಜಗಳು ಒಟ್ಟು 1,000 ರೂಪಾಯಿಗಳಿಗೆ ಹರಾಜಾಗಿವೆ ಎಂದು ಮಾಹಿತಿ ಲಭಿಸಿದೆ.
ಸಾಮಾನ್ಯವಾಗಿ ಕೋಳಿ ಅಂಕದಲ್ಲಿ ಬಳಸುವ ‘ಅಂಕದ ಹುಂಜಗಳು’ ಮಾರುಕಟ್ಟೆಯಲ್ಲಿ ಅಥವಾ ಹರಾಜಿನಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುತ್ತವೆ. ಆದರೆ, ಇಂದು ಹರಾಜಾದ ಕೋಳಿಗಳ ಬೆಲೆ ಮತ್ತು ಅವುಗಳ ತಳಿಯನ್ನು ಗಮನಿಸಿದ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
