ಕಡಬ: ಮಾಹಿತಿ ಹಕ್ಕು( RTI) ಕಾಯ್ದೆಯ ಬಿಸಿ: ದಾಖಲೆ ಕೇಳುತ್ತಿದ್ದಂತೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆ

ಕಡಬ-ಪಂಜ ಚರಂಡಿ ದುರಸ್ತಿಗೆ ಚಾಲನೆ, ಮತ್ತೆ ಗುದ್ದಲಿಪೂಜೆಯಂತೆ!

kadaba times

ಕಡಬ-ಪಂಜ ರಸ್ತೆ ಅಭಿವೃದ್ಧಿ ವಿಳಂಬಕ್ಕೆ RTI ಬಿಸಿ! ಮಾಹಿತಿ ಹಕ್ಕು ಅರ್ಜಿಯಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಚರಂಡಿ ದುರಸ್ತಿಗೆ ಚಾಲನೆ ನೀಡಿದ್ದಾರೆ. ಪಾರದರ್ಶಕತೆಗಾಗಿ ಸಾರ್ವಜನಿಕರ ಹೋರಾಟದ ವರದಿ.

kadaba times
uniq

ಕಡಬ: ಆಡಳಿತ ಯಂತ್ರದ ವಿಳಂಬ ಧೋರಣೆ ಮತ್ತು ಜನಪ್ರತಿನಿಧಿಗಳ ಗಡುವು ಮೀರಿ ಆಮೆಗತಿಯಲ್ಲಿ ಸಾಗುತ್ತಿದ್ದ ಕಡಬ-ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೊನೆಗೂ ‘ಮಾಹಿತಿ ಹಕ್ಕು ಕಾಯ್ದೆ-2005’ (RTI) ಬಿಸಿ ತಟ್ಟಿದೆ. ಒಬ್ಬ ಸಾಮಾನ್ಯ ಸಾಮಾಜಿಕ ಕಾರ್ಯಕರ್ತ ಸಲ್ಲಿಸಿದ RTI ಅರ್ಜಿ  ಲೋಕೋಪಯೋಗಿ ಇಲಾಖೆಯನ್ನು ಎಚ್ಚರಿಸಿದ್ದು , ಈಗ ಕಾಮಗಾರಿ ತರಾತುರಿಯಲ್ಲಿ ಆರಂಭಗೊಂಡಿದೆ.

ಗುತ್ತಿಗೆದಾರರ ಸಬೂಬು, ಅಧಿಕಾರಿಗಳ ಮೌನ!: ಕಡಬ ಮುಖ್ಯ ಪೇಟೆಯಿಂದ ಓಂತ್ರಡ್ಕವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದಕ್ಕೆ ಸಾರ್ವಜನಿಕರ ತಾಳ್ಮೆ ಕಟ್ಟೆಯೊಡೆದಿತ್ತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ನೀಡಿದ್ದ ಕಟ್ಟುನಿಟ್ಟಿನ ಗಡುವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಾಳಿಗೆ ತೂರಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ “ಗುತ್ತಿಗೆದಾರರು ಬರುತ್ತಿಲ್ಲ” ಎಂಬ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡಿದ್ದರು.

RTI ಎಂಬ ಸಂಜೀವಿನಿ: ವ್ಯವಸ್ಥೆಯ ಈ ಬೇಜವಾಬ್ದಾರಿತನಕ್ಕೆ ಸೆಡ್ಡು ಹೊಡೆದ ಸಾಮಾಜಿಕ ಕಾರ್ಯಕರ್ತರೊಬ್ಬರು, ಕಾಮಗಾರಿಯ ಸಂಪೂರ್ಣ ವಿವರ, ಅನುದಾನದ ಬಳಕೆ ಮತ್ತು ವಿಳಂಬಕ್ಕೆ ಕಾರಣಗಳನ್ನು ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಕಾನೂನು ಬದ್ಧ ಬಿಸಿ ತಟ್ಟುತ್ತಿದ್ದಂತೆಯೇ, ಇಷ್ಟು ದಿನ ಮೌನವಾಗಿದ್ದ ಜೆಸಿಬಿಗಳು ಕಡಬ-ಪಂಜ ರಸ್ತೆಯಲ್ಲಿ ಸದ್ದು ಮಾಡತೊಡಗಿವೆ. ಪ್ರಸ್ತುತ ಚರಂಡಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

kadaba times
kadaba times

ದಾಖಲೆ ನೀಡಲು ಅಧಿಕಾರಿಗಳ ತಂತ್ರಗಾರಿಕೆ?; ಮಾಹಿತಿ ಕೇಳಿದ ಬೆನ್ನಲ್ಲೇ ಕೆಲಸವನ್ನೇನೋ ಆರಂಭಿಸಲಾಗಿದೆ, ಆದರೆ ಅಧಿಕೃತ ದಾಖಲೆ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಹಣ ಪಾವತಿಸಿ ದಾಖಲೆ ಪಡೆಯಿರಿ” ಎಂದು ಉತ್ತರಿಸುವ ಮೂಲಕ ಅಧಿಕಾರಿಗಳು ಒಂದು ವಾರದ ಕಾಲಾವಕಾಶ ಪಡೆದು ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ’ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಮತ್ತೆ ಗುದ್ದಲಿ ಪೂಜೆ: ಸಾರ್ವಜನಿಕರ ವ್ಯಂಗ್ಯ: ಈಗಾಗಲೇ ಈ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿ ಕೆಲಸ ಅರ್ಧಕ್ಕೆ ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ 1 ಕೋಟಿ ರೂ. ವೆಚ್ಚದ ಮರು ಡಾಮರೀಕರಣಕ್ಕೆ ಸರಸ್ವತಿ ಶಾಲೆಯ ಬಳಿ ಫೆ.18 ಕ್ಕೆ  ಶಾಸಕರು  ಗುದ್ದಲಿ ಪೂಜೆ ಮಾಡಲು ಮುಂದಾಗಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. “ಒಮ್ಮೆ ಪೂಜೆ ಮಾಡಿದ ಕೆಲಸವೇ ಇನ್ನೂ ಮುಗಿದಿಲ್ಲ, ಈಗ ಮತ್ತೆ ಪೂಜೆ ಯಾಕೆ?” ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

Related Articles

Latest Articles