
ಕಡಬದ ಚಾರ್ವಕ ಗ್ರಾಮದ ಅಭಿಕಾರದಲ್ಲಿ ಶೌಚಾಲಯವಿಲ್ಲದೆ ಸಂಕಷ್ಟದಲ್ಲಿರುವ ದಲಿತ ಕುಟುಂಬದ ನೆರವಿಗೆ ಡಿವೈಎಸ್ಪಿ ಸಿ.ಕೆ. ರೋಹಿಣಿ ಧಾವಿಸಿದ್ದಾರೆ. ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಭೀಮ್ ಆರ್ಮಿ ಎಚ್ಚರಿಸಿದೆ


ಕಡಬ: ತಾಲೂಕಿನ ಚಾರ್ವಕ ಗ್ರಾಮದ ಅಭಿಕಾರ ಎಂಬಲ್ಲಿನ ಬಡ ದಲಿತ ಕುಟುಂಬವೊಂದು ಕಳೆದ 50 ವರ್ಷಗಳಿಂದ ಶೌಚಾಲಯ ಸೌಲಭ್ಯವಿಲ್ಲದೆ ನರಕಯಾತನೆ ಅನುಭವಿಸುತ್ತಿರುವ ಕಹಿ ಸತ್ಯವನ್ನು ‘ಕಡಬ ಟೈಮ್ಸ್’ ವರದಿ ಮಾಡಿ ಬೆಳಕಿಗೆ ತಂದಿತ್ತು. ನಂತರ ಬೆಳವಣಿಗೆಯಲ್ಲಿ ಡಿವೈಎಸ್ಪಿ ಸಿ.ಕೆ. ರೋಹಿಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸ್ಥಿತಿಯನ್ನು ಕಂಡು ಮರುಗಿದ್ದಾರೆ.
ಕಾಲನಿ ಭೇಟಿಯ ಹಿನ್ನೆಲೆಯಲ್ಲಿ ಕಡಬ ಠಾಣೆಗೆ ಆಗಮಿಸಿದ್ದ ಪುುತ್ತೂರು ಡಿವೈಎಸ್ಪಿ ಸಿ.ಕೆ. ರೋಹಿಣಿ ಅವರಿಗೆ ಈ ಕುಟುಂಬದ ದಯನೀಯ ಸ್ಥಿತಿಯ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅವರು, ಕಡಬ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ಅವರೊಂದಿಗೆ ಚಾರ್ವಕ ಗ್ರಾಮದ ಕುಂಞ ಮತ್ತು ಲತಾ ದಂಪತಿಯ ಮನೆಗೆ ತೆರಳಿದರು. ತಾರ್ಪಾಲು ಹೊದಿಸಿದ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬದ ಸ್ಥಿತಿಯನ್ನು ಕಂಡು ಅಧಿಕಾರಿಗಳು ಭಾವುಕರಾದರು.
ಸ್ಥಳದಲ್ಲೇ ಇದ್ದುಕೊಂಡೇ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕರೆ ಮಾಡಿದ ಡಿವೈಎಸ್ಪಿ, ತಕ್ಷಣವೇ ಈ ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯ ಈ ಮಾನವೀಯ ನಡೆಯಿಂದಾಗಿ ಕಳೆದ ಐದು ದಶಕಗಳಿಂದ ಅನ್ಯಾಯಕ್ಕೊಳಗಾಗಿದ್ದ ಕುಟುಂಬದಲ್ಲಿ ಹೊಸ ಆಶಾಕಿರಣ ಮೂಡಿದೆ.


ಭೀಮ್ ಆರ್ಮಿಯಿಂದ ಪ್ರತಿಭಟನೆಯ ಎಚ್ಚರಿಕೆ
ಈ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಭೀಮ್ ಆರ್ಮಿ ಸಂಘಟನೆಯು, ಇಂದು (ಫೆಬ್ರವರಿ 23, 2026) ಕಾಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಅಧಿಕೃತವಾಗಿ ಮನವಿ ಸಲ್ಲಿಸಿದೆ. “ಒಂದು ವಾರದೊಳಗೆ ಶೌಚಾಲಯ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪಂಚಾಯತ್ ಕಚೇರಿಯ ಮುಂದೆ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಸಂಘಟನೆ ಎಚ್ಚರಿಸಿದೆ. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಾಘವ ಕಳಾರ ಮತ್ತು ಸುಳ್ಯ ಘಟಕದ ಸದಸ್ಯ ಶೀನ ಬಾಳಿಲ ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಯಿತು.
50 ವರ್ಷಗಳ ನಿರಂತರ ಸಂಕಷ್ಟ
ಚಾರ್ವಕ ಗ್ರಾಮದ ಕುಂಞ ಮತ್ತು ಲತಾ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಳೆದ 50 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆಧುನಿಕ ಯುಗದ ಡಿಜಿಟಲ್ ಇಂಡಿಯಾದಲ್ಲೂ ಕನಿಷ್ಠ ಮೂಲಭೂತ ಸೌಕರ್ಯವಾದ ಶೌಚಾಲಯವಿಲ್ಲದೆ ಈ ಕುಟುಂಬ ಅಲೆದಾಡುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ‘ಕಡಬ ಟೈಮ್ಸ್’ ವರದಿಯ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಶೀಘ್ರವೇ ನ್ಯಾಯ ಸಿಗುವ ನಿರೀಕ್ಷೆಯಿದೆ.
