ಕಡಬ: ಐತ್ತೂರು ಕಾಡು ಕೋಣ ಬೇಟೆ ಪ್ರಕರಣ: ಬೇಟೆಯಾಡಲು ಬಳಸಿದ ಬಂದೂಕು ಇನ್ನೂ ಪತ್ತೆಯಾಗಿಲ್ಲ ಯಾಕೆ?

ಬಂಧಿತ ಓರ್ವ ಆರೋಪಿಗೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು:ಇತರ ನಾಲ್ವರು ಎಸ್ಕೇಪ್

kadaba times

ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ನಡೆದ ಕಾಡುಕೋಣ ಬೇಟೆ ಪ್ರಕರಣದ ಓರ್ವ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.ಪ್ರಕರಣದ ವಿವರ ಇಲ್ಲಿದೆ.

kadaba times
uniq

ಕಡಬ ತಾಲೂಕಿನ ಐತ್ತೂರು ಗ್ರಾಮದ ಮಜೂರು ಮೀಸಲು ಅರಣ್ಯದಲ್ಲಿ ನಡೆದ ಕಾಡುಕೋಣ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ  ಓರ್ವ ಆರೋಪಿಗೆ  ಪುತ್ತೂರಿನ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ: ಜನವರಿ 25, 2026 ರಂದು ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಐತ್ತೂರು ಗ್ರಾಮದ ಕೆ.ಎಫ್.ಡಿ.ಸಿ ರಬ್ಬರ್ ನೆಡುತೋಪಿನಲ್ಲಿ ಕಾಡುಕೋಣವನ್ನು ಬಂದೂಕಿನಿಂದ ಗುಂಡಿಕ್ಕಿ ಕೊಲ್ಲಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆರೋಪಿಗಳು ಕಾಡುಕೋಣವನ್ನು ತುಂಡು ಮಾಡಿ ಮಾಂಸ ಮಾಡುತ್ತಿದ್ದರು. ಅಧಿಕಾರಿಗಳನ್ನು ಕಂಡ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಸ್ಥಳದಲ್ಲಿ ಕಾಡುಕೋಣದ ದೇಹದ ಅವಶೇಷಗಳು, ಕೃತ್ಯಕ್ಕೆ ಬಳಸಿದ ಆಯುಧಗಳು ಮತ್ತು ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಯ ಬಂಧನ: ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸುಬ್ರಹ್ಮಣ್ಯ ಅರಣ್ಯ ಅಧಿಕಾರಿಗಳ ತಂಡವು, ಜನವರಿ 30ರಂದು ಐತ್ತೂರು ಗ್ರಾಮದ ಎಂಕೂಪು ನಿವಾಸಿ ಮಣಿಗಂಡನ್ (27) ಎಂಬಾತನನ್ನು ಸುಬ್ರಹ್ಮಣ್ಯದಲ್ಲಿ ಬಂಧಿಸಿತ್ತು. ವಿಚಾರಣೆಯ ವೇಳೆ ಆರೋಪಿಯು ತಾನು ಈ ಬೇಟೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಕೃತ್ಯಕ್ಕೆ ತನ್ನ ತಂದೆಯ ಹೆಸರಿನಲ್ಲಿದ್ದ ಎಲೆಕ್ಟ್ರಿಕ್ ಬೈಕ್ ಬಳಸಿದ್ದಾಗಿ ಮತ್ತು ಕೃತ್ಯದ ನಂತರ ಮುರುಡೇಶ್ವರಕ್ಕೆ ಪರಾರಿಯಾಗಿದ್ದಾಗಿ ಮಾಹಿತಿ ನೀಡಿದ್ದನು.ಕಾಡುಕೋಣ ಹತ್ಯೆಯ ಸಮಯದಲ್ಲಿ ಆರೋಪಿಯು ಸ್ಥಳದಲ್ಲಿ ಇದ್ದದ್ದು ಸಿಡಿಆರ್ (CDR) ವರದಿಯಿಂದ ದೃಢಪಟ್ಟಿದೆ.

ನ್ಯಾಯಾಲಯದ ನಡಾವಳಿ :ಜಾಮೀನು ನೀಡಲು ವಿರೋಧ:  ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಪ್ರಾಸಿಕ್ಯೂಷನ್ ಜಾಮೀನು ನೀಡಲು ಬಲವಾದ ವಿರೋಧ ವ್ಯಕ್ತಪಡಿಸಿದರು . ಬೇಟೆಯಾಡಲು ಬಳಸಿದ ಬಂದೂಕು ಇನ್ನೂ ಪತ್ತೆಯಾಗಿಲ್ಲ ಮತ್ತು ಎಫ್.ಎಸ್.ಎಲ್ (FSL) ವರದಿ ಬರಬೇಕಿದೆ ಎಂದು ವಾದಿಸಲಾಯಿತು.

kadaba times
kadaba times

ನ್ಯಾಯಾಲಯದ ಆದೇಶ: ಆರೋಪಿ ಮಣಿಗಂಡನ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಯು ಈಗಾಗಲೇ ಜ.31  ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ತನಿಖಾ ಸಂಸ್ಥೆಯು ಹೆಚ್ಚಿನ ವಿಚಾರಣೆಗೆ ಆತನನ್ನು ಕಸ್ಟಡಿಗೆ ಕೋರದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಿದೆ.ಜಾಮೀನು ನೀಡುವುದು ನಿಯಮ ಮತ್ತು ಜೈಲು ಅನಿವಾರ್ಯತೆ ಎಂಬುದು ವಿನಾಯಿತಿ ಎಂಬ ತತ್ವವನ್ನು ನ್ಯಾಯಾಲಯ ಎತ್ತಿ ಹಿಡಿಯಿತು.

ಜಾಮೀನಿನ ಪ್ರಮುಖ ಷರತ್ತುಗಳು: ಆರೋಪಿಯು 50,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಬ್ಬರ ಶ್ಯೂರಿಟಿಯನ್ನು ನೀಡಬೇಕು.ಸಾಕ್ಷ್ಯ ನಾಶಪಡಿಸಬಾರದು ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು.ಪ್ರತಿ 15 ದಿನಕ್ಕೊಮ್ಮೆ ಅರಣ್ಯ ಇಲಾಖೆ ಕಚೇರಿಗೆ ಹಾಜರಾಗಿ ಸಹಿ ಮಾಡಬೇಕು. ನ್ಯಾಯಾಲಯದ ಅನುಮತಿಯಿಲ್ಲದೆ ನ್ಯಾಯವ್ಯಾಪ್ತಿಯನ್ನು ಬಿಟ್ಟು ಹೋಗಬಾರದು.

ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳಾದ  ಐತ್ತೂರಿನ ಭುವನೇಶ್ವರ, ಕೊಂಡ ಮನೆ ಜೀವನ್, ಕೊಂಡಮನೆ ಸಜ್ಜಿನ್, ಕೆರ್ಮಾಯಿ ಜೈನ್ ವರ್ಕಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ಕಾಡುಕೋಣವು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್-1 ರ ಅಡಿಯಲ್ಲಿ ಬರುವ ಪ್ರಾಣಿಯಾಗಿದ್ದು, ಈ ಅಪರಾಧವು ಗಂಭೀರ ಸ್ವರೂಪದ್ದಾಗಿದೆ.


Related Articles

Latest Articles