
ಸಂಪಾಜೆ ಮುಖ್ಯರಸ್ತೆಯಲ್ಲಿ ಕಾರು ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ. ಸಮಾಜ ಸೇವಕ ಸುಂದರ ಚಿಟ್ಟಿಕ್ಕಾನ ನಿಧನ. ಹಿಟ್ ಅಂಡ್ ರನ್ ಪ್ರಕರಣದ ಪೂರ್ಣ ವಿವರ ಇಲ್ಲಿದೆ.


ಸಂಪಾಜೆ: ರಸ್ತೆಯಲ್ಲಿ ಅಜಾಗರೂಕತೆಯಿಂದ ಚಲಿಸುವ ವಾಹನಗಳು ಹೇಗೆ ಅಮಾಯಕರ ಜೀವ ಬಲಿಪಡೆಯುತ್ತವೆ ಎಂಬುದಕ್ಕೆ ಇಂದು ಸಂಪಾಜೆಯಲ್ಲಿ ನಡೆದ ಭೀಕರ ಅಪಘಾತವೇ ಸಾಕ್ಷಿ. ಅತಿವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಗುದ್ದಿದ ಪರಿಣಾಮ, ಕೊಯನಾಡಿನ ನಿವಾಸಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಂದರ ಚಿಟ್ಟಿಕ್ಕಾನ (62) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಅಪರಾಹ್ನ ಸುಂದರರವರು ಗ್ರಾ.ಪಂ. ಸದಸ್ಯೆ ಅನಿತಾ ಅವರ ತಾಯಿ ಪದ್ಮಾವತಿಯವರನ್ನು ಚಡವು ಎಂಬಲ್ಲಿನ ಮನೆಗೆ ಬಿಡಲು ಸಂಪಾಜೆಯಿಂದ ರಿಕ್ಷಾದಲ್ಲಿ ಹೊರಟಿದ್ದರು. ಸಂಪಾಜೆಯ ಪೆಟ್ರೋಲ್ ಪಂಪ್ ದಾಟಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ, ಮಡಿಕೇರಿ ಕಡೆಗೆ ಅತಿವೇಗವಾಗಿ ತೆರಳುತ್ತಿದ್ದ ಕಾರೊಂದು ರಾಂಗ್ ಸೈಡ್ನಲ್ಲಿ ಬಂದು ಇವರ ರಿಕ್ಷಾಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಸುಂದರರವರು ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದರು. ಮಾನವೀಯತೆಯನ್ನೇ ಮರೆತ ಕಾರು ಚಾಲಕ, ಅಪಘಾತದ ನಂತರ ವಾಹನ ನಿಲ್ಲಿಸದೆ ಮಡಿಕೇರಿ ಕಡೆಗೆ ಪರಾರಿಯಾಗಿದ್ದಾನೆ.
ದಿ. ಬಿಸಿಲುಮನೆ ರಾಮಣ್ಣ ಗೌಡರ ಪುತ್ರರಾದ ಸುಂದರರವರು ಕೊಡಗು ಸಂಪಾಜೆ ಗ್ರಾಮ ಪಂಚಾಯತ್ನ ಸದಸ್ಯರಾಗಿ ಹಾಗೂ ಉಪಾಧ್ಯಕ್ಷರಾಗಿ ಜನಪ್ರಿಯ ಸೇವೆ ಸಲ್ಲಿಸಿದ್ದರು. ಸದಾ ಸಮಾಜದ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಅವರು, ಸಾತ್ವಿಕ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು.
