ಕಡಬದಲ್ಲಿ ನಡೆದ ಶೂಟೌಟ್ ಕೇಸ್‌:ಕಮ್ಯುನಿಸ್ಟ್ ಮುಖಂಡನ ಹಳೆಯ ಬಂದೂಕು ಅಮೀನ್ ಕೈಗೆ ಸೇರಿದ್ದು ಹೇಗೆ?

kadaba times

ಕಡಬದ ರಾಮಕುಂಜದಲ್ಲಿ ನಡೆದ 17 ವರ್ಷದ ಮೋಕ್ಷ್ ಸಾವಿನ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ. ಘಟನೆಗೆ ಬಳಕೆಯಾದ ಬಂದೂಕು ಹಿರಿಯ ಕಮ್ಯುನಿಸ್ಟ್ ಮುಖಂಡ ಮದನ್ ಸೇರಾಜೆ ಅವರದ್ದಾಗಿದ್ದು, ಹುಲಿ ಬೇಟೆಯ ಇತಿಹಾಸ ಹೊಂದಿದೆ ಎಂದು ಹೇಳಲಾಗುತ್ತಿದೆ . ಸಂಪೂರ್ಣ ವರದಿ ಇಲ್ಲಿದೆ.

kadaba times
uniq

ಕಡಬ: ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಮತ್ತು ಜಯಶ್ರೀ ದಂಪತಿಯ ಪುತ್ರ ಮೋಕ್ಷ್ (17) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಬಾಲಕನ ಬಲಿ ಪಡೆದ ಆ ಬಂದೂಕಿಗೆ ಬಲು ದೊಡ್ಡ ಶಿಕಾರಿಯ ಇತಿಹಾಸವಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಹುಲಿ ಬೇಟೆಯಾಡಿದ್ದ ಇಂಗ್ಲೆಂಡ್ ಮೇಡ್ ಬಂದೂಕು?:  ಜ.24ರಂದು ನಡೆದ ಈ ದುರಂತದಲ್ಲಿ ಬಳಕೆಯಾಗಿರುವುದು ಇಂಗ್ಲೆಂಡ್ ನಿರ್ಮಿತ ಸಿಂಗಲ್ ಬ್ಯಾರಲ್ ಎಸ್‌ಬಿಬಿಎಲ್ (SBBL) ಬಂದೂಕು.  ಇದು ವಸಂತ ಅಮೀನ್ ಅವರ ಸೋದರ ಮಾವ,  ಹಿರಿಯ ಕಮ್ಯುನಿಸ್ಟ್ ಮುಖಂಡ ದಿವಂಗತ ಮದನ್ ಸೇರಾಜೆ ಅವರಿಗೆ ಸೇರಿದ್ದಾಗಿತ್ತು ಎಂದು ತಿಳಿದುಬಂದಿದೆ.

ಪ್ರಭಾವಿ ಮುಖಂಡರಾಗಿದ್ದ ಮದನ್ ಅವರು ತಮ್ಮ ಕಾಲದಲ್ಲಿ ನಾಡಿಗೆ ಬರುತ್ತಿದ್ದ ಹುಲಿಗಳನ್ನು ಇದೇ ಬಂದೂಕಿನಿಂದ ಹೊಡೆದುರುಳಿಸುತ್ತಿದ್ದರು ಎಂದು ಹೇಳಲಾಗಿದೆ . ಏಕಕಾಲಕ್ಕೆ ಎರಡು ಹುಲಿಗಳನ್ನು ಬೇಟೆಯಾಡಿದ ಅಪರೂಪದ ಛಾಯಾಚಿತ್ರಗಳು ಇಂದಿಗೂ ಅವರ ಮನೆಯಲ್ಲಿವೆಯಂತೆ  . ಆದರೆ, ಅಂತಹ ಅಪರೂಪದ ಮತ್ತು ಅಪಾಯಕಾರಿ ಬಂದೂಕು ವಸಂತ  ಅವರ ಕೈ ಗೆ ಹೇಗೆ ಬಂತು ಎಂಬುದು ಈಗ ತನಿಖೆಯ ಪ್ರಮುಖ ಪ್ರಶ್ನೆಯಾಗಿದೆ.

kadaba times
kadaba times

ತಂದೆಯ ದೇಹದಲ್ಲಿ ಪತ್ತೆಯಾದ ಗುಂಡು?  ಪ್ರಕರಣಕ್ಕೆ ಹೊಸ ತಿರುವು:  ಘಟನೆಯ ಆರಂಭದಲ್ಲಿ ಮಗ ಮೋಕ್ಷ್ ತನಗೆ ಇರಿದು, ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಸಂತ ಅಮೀನ್ ಪೊಲೀಸರಿಗೆ ತಿಳಿಸಿದ್ದರು.  ಆದರೆ, ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದಾಗ ವಸಂತ ಅಮೀನ್ ಅವರ ಕಿಬ್ಬೊಟ್ಟೆಯ ಭಾಗದಲ್ಲಿ ಗುಂಡು ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ . ಇದರಿಂದಾಗಿ ಘಟನಾ ಸ್ಥಳದಲ್ಲಿ ತಂದೆ-ಮಗನ ನಡುವೆ ಏನು ನಡೆದಿದೆ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.ಪೊಲೀಸರ ತನಿಖೆಯ ನಂತರ ವಾಸ್ತಾವ ವಿಚಾರ ತಿಳಿದು ಬರಲಿದೆ.

ತಾಯಿಯ ಗಂಭೀರ ಆರೋಪ: ಕಳೆದ ಐದು ತಿಂಗಳಿನಿಂದ ಪೆರ್ಲದ ತವರು ಮನೆಯಲ್ಲಿದ್ದ ಜಯಶ್ರೀ ಅವರು, ತನ್ನ ಪತಿ ವಸಂತ ಅಮೀನ್ ಅವರೇ ಮಗನನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಜ.24ರಂದು ಬೆಳಿಗ್ಗೆವಷ್ಟೇ ವಸಂತ ಅಮೀನ್ ಮಗನನ್ನು ಮಂಗಳೂರಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ಬಂದಿದ್ದರು. ಬಂದ ಕೆಲವೇ ಗಂಟೆಗಳಲ್ಲಿ ಈ ರಕ್ತಸಿಕ್ತ ಘಟನೆ ಸಂಭವಿಸಿದೆ.

ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ವಸಂತ ಅಮೀನ್ ಗುಣಮುಖರಾದ ನಂತರವಷ್ಟೇ ಸತ್ಯಾಂಶ ಹೊರಬರಬೇಕಿದೆ. ಘಟನೆ ಕುರಿತಂತೆ ಪೊಲೀಸರೂ ಪ್ರಾಥಮಿಕ ಮಾಹಿತಿ ಮಾತ್ರ ನೀಡಿದ್ದು ದೂರು ದಾಖಲಾಗಿರುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ತನಿಖೆಯನ್ನು ಅತ್ಯಂತ ಗೌಪ್ಯವಾಗಿರಿಸಿದ್ದಾರೆ. ಕೌಟುಂಬಿಕ ಕಲಹದ ಕಿಚ್ಚು ಒಂದು ಜೀವವನ್ನು ಬಲಿ ಪಡೆದಿದ್ದರೂ, ಅದರ ಹಿಂದಿನ ನೈಜ ರೂವಾರಿ ಯಾರು ಎಂಬುದು ಇಂದಿಗೂ ನಿಗೂಢ.ಇದರಿಂದಾಗಿ ಘಟನೆ ಕುರಿತಂತೆ ಇನ್ನೂ ಸ್ಪಷ್ಟತೆ ಸಿಗದೇ ಇರುವುದು ಜನರಲ್ಲಿ ಗೊಂದಲ ಉಂಟಾಗಿದೆ.

Related Articles

Latest Articles