
ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೊಡ್ಡಕೊಪ್ಪ ವಾರ್ಡಿನ ದಾಸರಗುಡ್ಡೆ ಪರಿಶಿಷ್ಟ ಸಮುದಾಯದ ಕಾಲನಿಗೆ ಪ.ಪಂ ಅಧ್ಯಕ್ಷೆ ತಮ್ಮನಾ ಜಬೀನ್ ನ.30 ರಂದು ಭೇಟಿ ನೀಡಿದರು.



ನೀರಿನ ಟ್ಯಾಂಕ್ ಗೆ ಸಮರ್ಪವಾಗಿ ನೀರು ಬಾರದಿರುವುದನ್ನು ಗಮನಿಸಿದ ಅಧ್ಯಕ್ಷರು ವಾಟರ್ ಮ್ಯಾನ್ ಗೆ ಪೋನಾಯಿಸಿ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಅಲ್ಲದೆ ನೀರಿನ ಸಮಸ್ಯೆ ಬಗ್ಗೆ ತಿಳಿಸದ ಬಗ್ಗೆ ಪ್ರಶ್ನಿಸಿದರು. ಅಲ್ಲದೆ ಕುಡಿಯುವ ನೀರಿನ ಕುರಿತಂತೆ ವಿವರ ಪಡೆದರು.
ಇಲ್ಲಿ ನಿರ್ಮಿಸಲಾದ ಸಮುದಾಯ ಶೌಚಾಲಯಕ್ಕೆ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಆಗದ ಬಗ್ಗೆ , ಕುಡಿಯುವ ನೀರಿನ ಸಮಸ್ಯೆ, ದಾರಿ ದೀಪದ ಬಗ್ಗೆ ಅಧ್ಯಕ್ಷೆ ಜೊತೆ ಪತ್ರಕರ್ತ ವಿ.ಕೆ ಕಡಬ ಚರ್ಚಿಸಿದರು . ನಿವಾಸಿಗಳ ಜೊತೆ ಮಾತನಾಡಿದ ಅಧ್ಯಕ್ಷೆಯವರು ಸಮುದಾಯ ಶೌಚಾಲಯದ ಬಗ್ಗೆ ಬಾಕಿ ಇರುವ ಕೆಲಸಗಳನ್ನು ಮುಂದುವರಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದರು. ನೀರಿನ ಸಂಪರ್ಕಕ್ಕಾಗಿ ಟೆಂಡರ್ ಆಗಿದ್ದು ಈ ಬಗ್ಗೆ ಸಂಬಂಧಿಸಿದವರಿಗೆ ಸೂಚಿಸುವುದಾಗಿ ತಿಳಿಸಿದರು.


ನೀರಿನ ಬಿಲ್ ನಿಗದಿತ ದಿನದಲ್ಲಿ ಪಾವತಿಸುವಂತೆ ನೋಟಿಸು ನೀಡಿದ ಬಗ್ಗೆ ನಿವಾಸಿಗಳು ಆಕ್ರೋಶ ಹೊರಹಾಕಿದರು. ಈವೇಳೆ ಹಂತ ಹಂತವಾಗಿ ನೀರಿನ ಬಿಲ್ ಕಟ್ಟಿ ಪ.ಪಂ ಜೊತೆ ಸಹಕರಿಸುವಂತೆ ಮನವರಿಕೆ ಮಾಡಿದರು.
ಎಂಡೋ ಪೀಡಿತ ಯುವತಿ ಮನೆಗೆ ಭೇಟಿ: ಎಂಡೋ ಪೀಡಿತ ಯುವತಿ ಸುನಂದ ಎಂಬವರ ಮನೆ ಶೌಚಾಲಯ ಸೋರುತ್ತಿರುವ ಬಗ್ಗೆ , ಸ್ನಾನ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದ ಬಗ್ಗೆ ಅಧ್ಯಕ್ಷರ ಗಮನಕ್ಕೆ ತರಲಾಯಿತು. ಈ ಬಗ್ಗೆ ಪ.ಪಂ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರಲ್ಲದೆ , ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ನೀಲಯ್ಯ ಓಂತ್ರಡ್ಕ, ಪೊಡಿಯ ದಾಸರಗುಡ್ಡೆ, ಬಾಬು, ಚೋಮು,ಚೆನ್ನಮ್ಮ, ಸುಶೀಲ, ಗೀತಾ , ದಿವಾಕರ ದಾಸರಗುಡ್ಡೆ ಸೇರಿದಂತೆ ನಿವಾಸಿಗಳು ಹಾಜರಿದ್ದರು.
