
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯ ಕುರಿತು ನಿರ್ದೇಶನ ಕೋರಿ ಎಸ್ಐಟಿಯು ಸಲ್ಲಿಕೆ ಮಾಡಿರುವ ವರದಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ನಡೆದು ಸೂಕ್ತ ಕಾನೂನು ಸಲಹೆ ಪಡೆಯುವ ಜತೆಗೆ ಅಂತಿಮ ವರದಿ ಸಿದ್ಧಪಡಿಸುವಂತೆ ನ್ಯಾಯಾಧೀಶರು ಎಸ್ಐಟಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಡಿ. 26ಕ್ಕೆ ಮುಂದೂಡಿದ್ದಾರೆ.


ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ನ. 20ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್)ದ ಸೆಕ್ಷನ್ 215ರಡಿಯಲ್ಲಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಚಿನ್ನಯ್ಯ ಸಹಿತ 6 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖೀಸಿ ಸುಮಾರು 120 ದಿನಗಳ ತನಿಖೆಯ ವಿವರವನ್ನು ತಿಳಿಸಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡುವಂತೆ ವಾದ ಮಂಡಿಸಲಾಗಿತ್ತು.
ಎಸ್ಐಟಿ ವರದಿಗೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯದಲ್ಲಿ ಸಾಕಷ್ಟು ವಾದ ನಡೆದಿದ್ದು, ಪರಿಪೂರ್ಣ ವರದಿ ಸಲ್ಲಿಸುವ ಅಂಶಗಳು ಕೂಡ ಪ್ರಸ್ತಾವಗೊಂಡಿದೆ. ಹಾಲಿ ಎಸ್ಐಟಿಯು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರೂ, ಅದು ಪರಿಪೂರ್ಣ ವರದಿ ಅಲ್ಲದೇ ಇರುವುದರಿಂದ ಈ ಹಂತದಲ್ಲಿ ಸುಳ್ಳು ಸಾಕ್ಷಿಯ ಕುರಿತು ತೀರ್ಮಾನ ಕೈಗೊಳ್ಳುವುದು ಸಾಧ್ಯವಿಲ್ಲ.


ಹಾಲಿ ಲಭಿಸಿರುವ ತಲೆಬುರುಡೆಯ ಸಾಕ್ಷಿಯು ಆರೋಪಿಗಳ ಸುಳ್ಳು ಸಾಕ್ಷಿಯನ್ನು ತಿಳಿಸುತ್ತಿದೆ ಎಂಬ ವಾದ ಮಂಡನೆಯಾದರೂ, ಮುಂದೆ ಹೆಚ್ಚಿನ ವಿಚಾರಣ ಪ್ರಕ್ರಿಯೆಗಳು ನಡೆಯಬೇಕಿದೆ ಎಂದು ನ್ಯಾಯಾಧೀಶರು ಪ್ರಕರಣವನ್ನು ಡಿ. 26ಕ್ಕೆ ಮುಂದೂಡಿ ಆದೇಶ ನೀಡಿದ್ದಾರೆ.
