
ಕಡಬ ಟೈಮ್ಸ್ ಆಲಂಕಾರು: ಅಂಗನವಾಡಿ ಕೇಂದ್ರದಲ್ಲಿದ್ದ ಬೆಲೆ ಬಾಳುವ ಟಿವಿ ಹಾಗೂ ಇತರ ವಸ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ಅ.7 ರಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳೂರಿನ ಬೆರಳಚ್ಚು ತಜ್ಞರು,ಶ್ವಾನದಳದವರು ಸ್ಥಳಕ್ಕೆ ಭೇಟಿ ತನಿಖೆ ನಡೆಸಿದ್ದರು.ಆದರೆ ಪ್ರಕರಣ ನಡೆದು ಎರಡು ತಿಂಗಳು ಹತ್ತಿರ ವಾಗುತ್ತಿದ್ದರೂ ಕಳ್ಳರ ಪತ್ತೆಯಾಗಿಲ್ಲ.


ಅಂಗನವಾಡಿಗೆ ಶಿಶು ಅಬಿವೃದ್ದಿ ಇಲಾಖಾ ಮುಖಾಂತರ ದಿನಾಂಕ ಎ.4 ರಂದು ಸುಮಾರು 45,000 ರೂ ಮೌಲ್ಯದ ( Samsung Ultra HD/4K. TV 108 Cm ಟಿ.ವಿ) ಯನ್ನು ಒದಗಿಸಲಾಗಿತ್ತು. ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಅ.6 ರಂದು ರಂದು ಸಂಜೆ ಅಂಗನವಾಡಿ ಕೇಂದ್ರವನ್ನು ಬಂದ್ ಮಾಡಿ ಮನೆಗೆ ತೆರಳಿದ್ದರು. ಮರುದಿನ ಅ.7 ರಂದು ಬೆಳಿಗ್ಗೆ ಅಂಗನವಾಡಿ ಸಹಾಯಕಿ ಬಂದು ಬಾಗಿಲು ತೆರೆದಾಗ ಅಂಗನವಾಡಿ ಕೇಂದ್ರದ ಹಿಂಬದಿಯ ಬಾಗಿಲನ್ನು ಒಡೆದು ಅಂಗನಾಡಿ ಕೇಂದ್ರದಲ್ಲಿದ್ದ ಟಿ.ವಿ ಮತ್ತು ಟಿ.ವಿ ರಿಮೋಟ್ ಮತ್ತು Mitsun ಸ್ಟೆಬಿಲೈಸರ್ ನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿತ್ತು
ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಹಿಂಬದಿಯ ಬಾಗಿಲನ್ನು ಒಡೆದು ಅಂಗನವಾಡಿ ಕೇಂದ್ರದಲ್ಲಿದ್ದ ಟಿ.ವಿ ಮತ್ತು ಟಿ.ವಿ ರಿಮೋಟ್ ,ಅಂದಾಜು ಮೌಲ್ಯ 45000/- ಮತ್ತು Mitsun ಸ್ಟೆಬಿಲೈಸರ್ ಅಂದಾಜು ಮೌಲ್ಯ 2000/- ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಕಳವು ಮಾಡಿರುವ ಸೊತ್ತುಗಳ ಅಂದಾಜು ಮೌಲ್ಯರೂ 47,000/. ಆಗಬಹುದು . ಆದುದರಿಂದ ಕಳವು ಆಗಿರುವ ಸೊತ್ತು ಮತ್ತು ಆರೋಪಿತನನ್ನು ಪತ್ತೆ ಮಾಡಿಕೊಡಬೇಕಾಗಿ ಕಡಬ ಪೋಲಿಸರಿಗೆ ಅಂಗನ ಶಿಕ್ಷಕಿ ಸವಿತಾ ರವರು ದೂರು ಸಲ್ಲಿಸಿದ್ದರು.
ಪೊಲೀಸರ ಮಾಹಿತಿ ಪ್ರಕಾರ ಈ ಪ್ರಕರಣ ತನಿಖೆಯಲ್ಲಿದೆ ಎಂಬ ಮಾಹಿತಿ ಲಭಿಸಿದೆ. ಇನ್ನೊಂದೆಡೆ ಇದೇ ಘಟನೆಗೆ ಸಂಬಂಧಿಸಿ ವ್ಯಕ್ತಿಯೋರ್ವನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಆತ ಯಾವುದೋ ಕಾರಣಕ್ಕೆ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಜಿಲ್ಲಾ ಪೊಲೀಸರು ಪ್ರತ್ಯೇಕ ತಂಡ ರಚಿಸಿ ಗ್ರಾಮೀಣ ಭಾಗದಲ್ಲಿ ನಡೆಯುವ ಕಳ್ಳತನ ಪ್ರಕರಣಗಳನ್ನು ಭೇದಿಸಬೇಕೆಂಬ ಒತ್ತಾಯಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಅಲ್ಲದೆ ಸರ್ಕಾರಿ ಸೊತ್ತು ಕಳ್ಳತನವಾದರೆ ಇಂತಹ ವಿಳಂಬ ಯಾಕೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.


ಪೊಲೀಸರಿಗೆ ಸವಾಲು: ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿರುವ ಆಲಂಕಾರು ಪೇಟೆಯಲ್ಲಿ ಅಳವಡಿಸಿರುವ ಸಿಸಿ ಟಿವಿ ಕಾರ್ಯನಿರ್ವಹಿಸುತ್ತಿಲ್ಲ. ನಿರ್ವಹಣೆ ಕೊರತೆಯಿಂದ ಕೆಟ್ಟು ಹೋಗಿದೆ ಎಂದು ತಿಳಿದು ಬಂದಿದೆ. ಇನ್ನು ಕೆಲ ಅಂಗಡಿಯವರು ಅಳವಡಿಸಿರುವ ಸಿಸಿ ಟಿವಿಗಳು ಅಂಗಡಿಯನ್ನಷ್ಟೇ ಕೇಂದ್ರಿಕರಿಸಿದೆ. ವಿವಿಧ ಘಟನೆಗೆ ಸಂಬಂಧಿಸಿ ಪೊಲೀಸರು ಆಗಾಗ ಸಿಸಿ ಟಿವಿ ಅಳವಡಿಸಿರುವ ಅಂಗಡಿಯವರಿಗೆ ಮಾಹಿತಿ ಕೇಳುತ್ತಿರುವುದಾಗಿ ಹೇಳಲಾಗಿದೆ .ಹೀಗಾಗಿಯೇ ಇಂತಹ ಕಿರಿಕಿರಿಯನ್ನು ತಪ್ಪಿಸಲು ಸಿಸಿ ಟಿವಿ ಹಾಕಿದವರು ತಮ್ಮ ಅಂಗಡಿಯನ್ನಷ್ಟೇ ಕೇಂದ್ರಿಕರಿಸಿದ್ದಾರೆ. ರಸ್ತೆಗಳು ಕವರ್ ಆಗುವ ಯಾವುದೇ ಸಿಸಿ ಟಿವಿಗಳು ಇಲ್ಲವಾಗಿದೆ.
ಕಳ್ಳರಿಗೆ ರಾಜಮಾರ್ಗ : ಆಲಂಕಾರು ಪೇಟೆಯಿಂದ ಒಂದೆಡೆ ಕುದ್ಮಾರು –ಶಾಂತಿ ಮೊಗರು ರಸ್ತೆ ಮೂಲಕ ಅತ್ತ ಪುತ್ತೂರಿಗೋ ಅಥವಾ ಕಾಣಿಯೂರು ಮಾರ್ಗವಾಗಿ ಬೇರೆ ಕಡೆ ಹೋಗಲು ಸಾಧ್ಯವಿದೆ. ಇತ್ತ ಮಾದೇರಿ ರಸ್ತೆ ಮೂಲಕ ನೆಲ್ಯಾಡಿ ಸಂಪರ್ಕ ರಸ್ತೆಯಲ್ಲಿ ಹೆದ್ದಾರಿ ತಲುಪಬಹುದು.ಅಲ್ಲದೆ ಮುಖ್ಯ ಪೇಟೆಯಿಂದ ಮುಂದಕ್ಕೆ ಉಪ್ಪಿನಂಗಡಿ ರಸ್ತೆ , ಇತ್ತ ಕಡಬ ರಸ್ತೆ ಇದ್ದು ಅಡ್ಡದಾರಿಗಳೇ ಅಧಿಕವಾಗಿವೆ. ಹೀಗಾಗಿ ಕಳ್ಳರಿಗೆ ರಾಜಮಾರ್ಗವಾಗಿದೆ.
