
ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾಮಹೋತ್ಸವಕ್ಕೆ ಬಂದಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಮಾಂಗಲ್ಯಸರವನ್ನು ಕಳ್ಳರು ಎಗರಿಸಿದ ಘಟನೆ ನ.26 ರಂದು ನಡೆದಿದೆ.


ಕಡಬದ ತುಂಬೆತ್ತಡ್ಕ ನಿವಾಸಿ ಶ್ರೀಮತಿ ಹೇಮಲತಾ ಅವರು ಕುಟುಂಬಸ್ಥರೊಂದಿಗೆ ನ.26 ರಂದು ಮುಂಜಾನೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾಮಹೋತ್ಸವಕ್ಕೆ ಬಂದಿದ್ದರು.
ದೇವಸ್ಥಾನಕ್ಕೆ ಒಳಪ್ರವೇಶಿಸಿ ದೇವರ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ದೇವಸ್ಥಾನದ ಹೊರಗೆ ರಥಬೀದಿಯ ಬಲಭಾಗಕ್ಕೆ ಜನದಟ್ಟನೆಯ ನಡುವೆ ನಿಂತಿದ್ದರು.
ಹೆಚ್ಚು ಜನಸಂದಣಿ ಇದ್ದ ಕಾರಣ ದೇವಸ್ಥಾನದ ಒಳಗೆ ಹೋಗಿದ್ದ ವೇಳೆ ಪರಿಚಯಸ್ಥರು ಮಹಿಳೆಯ ಕತ್ತನ್ನು ಗಮನಿಸಿ ಮಾಂಗಲ್ಯ ಸರ ಕಾಣುತ್ತಿಲ್ಲ ಎಂದು ಕೇಳಿದಾಗ ಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದೆ.


ರಥಬೀದಿಯಲ್ಲಿ ನಿಂತು ದೇವರ ತೇರು ಎಳೆಯುವುದನ್ನು ನೋಡುತ್ತಿರುವಾಗ ಹೆಚ್ಚು ಜನದಟ್ಟಣೆ ಮದ್ಯೆ ಯಾರೋ ಕಳ್ಳರು ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಫಿರ್ಯಾದುದಾರರ ಗಮನಕ್ಕೆ ಬಾರದಂತೆ ಕಳವು ಮಾಡಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳವಾದ ಚಿನ್ನದ ಮಾಂಗಲ್ಯ ಸರದ ತೂಕ ಅಂದಾಜು 100 ಗ್ರಾಂ ತೂಕವಿದ್ದು ಅದರ ಅಂದಾಜು ಮೌಲ್ಯ 6,00,000/- (ಆರು ಲಕ್ಷ) ಆಗಬಹುದಾಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ 59/2025 ಕಲಂ:303(2)BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.
