
ದಕ್ಷಿಣ ಕನ್ನಡ ಜಿಲ್ಲೆಗೆ ಆನೆ ಕಾರ್ಯಾಚರಣೆ ಪಡೆ (ಇಟಿಎಫ್-ಎಲಿಫೆಂಟ್ ಟಾಸ್ಕ್ ಫೋರ್ಸ್) ಯನ್ನೇ ಅಂತಿಮಗೊಳಿಸುವುದು ಬಹುತೇಕ ಖಚಿತವಾಗಿದೆ. ಅಲ್ಲಲ್ಲಿ ಮಾನವ-ಆನೆ ಸಂಘರ್ಷ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆನೆ ಕಾರ್ಯಪಡೆ ಹಾಗೂ ಆನೆ ಶಿಬಿರ ಈ ಎರಡು ಯೋಜನೆಗಳಿಗೂ ಅರಣ್ಯ ಇಲಾಖೆ ಪ್ರಸ್ತಾವ ಕಳುಹಿಸಿತ್ತು, ಆದರೆ ಆನೆ ಶಿಬಿರಕ್ಕೆ ದೊಡ್ಡ ಮೊತ್ತದ ಬಂಡವಾಳ ಬೇಕಾಗಬಹುದು ಅಲ್ಲದೆ ಈಗಿನ ಪ್ರಸ್ತಾವಿತ ಗುಂಡ್ಯ ಪ್ರದೇಶದಲ್ಲಿ ಜನರಿಂದ ವಿರೋಧವೂ ಇರುವ ಹಿನ್ನೆಲೆಯಲ್ಲಿ ಸುಳ್ಯ ಹಾಗೂ ಗುಂಡ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಆನೆ ಕಾರ್ಯಪಡೆ ಸ್ಥಾಪನೆ ಶೀಘ್ರ ಅನುಮೋದನೆ ಪಡೆಯುವ ನಿರೀಕ್ಷೆ ಇದೆ.


ಪ್ರಸ್ತುತ ಇದು ಸಂಪುಟ ಅನುಮೋದನೆ ಪಡೆದಿದ್ದು, ಹಣಕಾಸು ಇಲಾಖೆಯ ಪರಿಶೀಲನೆ ಹಂತದಲ್ಲಿದೆ, ಮುಂಬರುವ ವಿಧಾನಸಭೆ ಅಧಿವೇಶನಕ್ಕೆ ಮೊದಲೇ ಅಂತಿಮ ಅನುಮೋದನೆ ಪಡೆಯುವ ಸಾಧ್ಯತೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಾರ್ಯಪಡೆ ರಚನೆ : ಪ್ರಸ್ತುತ ಆನೆ ದಾಳಿಗೊಳಗಾಗಿ ಬೆಳೆ ಪರಿಹಾರ ಪಡೆಯುವ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮುಂಚೂಣಿ ಅಧಿಕಾರಿ/ಸಿಬಂದಿಗಳ ಹುದ್ದೆ ಭಾರಿ ಪ್ರಮಾಣದಲ್ಲಿ ಕೊರತೆ ಇದೆ. ಹಾಗಾಗಿ ಆನೆ ದಾಳಿಯಾದ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ಮಾಡುವುದು ಅಸಂಭವ. ಇದೇ ಕಾರಣಕ್ಕೆ ಈ ಆನೆ ಹಿಮ್ಮೆಟ್ಟಿಸುವಂತಹ ಕಾರ್ಯಕ್ಕೆ ಪ್ರತ್ಯೇಕ ಆನೆ ಕಾರ್ಯಪಡೆ ಅಗತ್ಯ ಎಂದು ಅರಣ್ಯ ಇಲಾಖೆ ಈ ಕುರಿತು ಪ್ರಸ್ತಾವ ಸಲ್ಲಿಸಿತ್ತು.
ಲಭ್ಯ ಮಾಹಿತಿಯಂತೆ ಸುಳ್ಯವನ್ನು ಕೇಂದ್ರವಾಗಿರಿಸಿ ಇಟಿಎಫ್ ಕೆಲಸ ಮಾಡಲಿದೆ, ಸುಳ್ಯದ ಹೊರಭಾಗದಲ್ಲಿರುವ ಅರಣ್ಯ ಇಲಾಖೆಯ ಡಿಪೋ ಸ್ಥಳದಲ್ಲಿ ಈ ಕೇಂದ್ರಸ್ಥಾನ ಇರಲಿದೆ. ಇದರ ಅಧೀನದಲ್ಲಿ ಸುಳ್ಯ ಹಾಗೂ ಗುಂಡ್ಯ ಘಟಕಗಳು ಕೆಲಸ ಮಾಡಲಿವೆ.
ಕೇಂದ್ರಸ್ಥಾನದಲ್ಲಿ ಓರ್ವ ಉಪ ಅರಣ್ಯ ಸಂರಕ್ಷಣಾಧಿಕಾರಿ, ಓರ್ವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಓರ್ವ ವಲಯ ಅರಣ್ಯಾಧಿಕಾರಿ ಇರುತ್ತಾರೆ, ಸುಳ್ಯ ಹಾಗೂ ಗುಂಡ್ಯ ಘಟಕಗಳಲ್ಲಿ ತಲಾ 2 ಉಪವಲಯ ಅರಣ್ಯಾಧಿಕಾರಿ, 2 ಅರಣ್ಯ ಪಾಲಕರು, 16 ಹೊರಗುತ್ತಿಗೆಯ ಕಾವಲುಗಾರರು ಹಾಗೂ ತಲಾ ಒಂದು 4ಗಿ4 ಸುಸಜ್ಜಿತ ವಾಹನ ಹಾಗೂ ಚಾಲಕರು ಇರಲಿದ್ದಾರೆ.ಮೂಲಭೂತ ಸೌಕರ್ಯವಾಗಿ ಇಟಿಎಫ್ ಕಚೇರಿ ಕಟ್ಟಡಕ್ಕೆ 50 ಲಕ್ಷ ರೂ, ಕಂಟ್ರೋಲ್ ರೂಂ ಸ್ಥಾಪನೆಗೆ 10 ಲಕ್ಷ ರೂ, ವಾಹನ ಖರೀದಿ, ಚಾಲಕರಿಗಾಗಿ 28 ಲಕ್ಷರೂ. ಸೇರಿದಂತೆ 172.50 ಲಕ್ಷ ರೂ. ಅಂದಾಜಿಸಲಾಗಿದೆ.
ಇಟಿಎಫ್ ಅಗತ್ಯತೆ: ಆನೆ ಹಿಮ್ಮೆ ಟ್ಟಿಸುವುದಕ್ಕೆ ನುರಿತ ಸಿಬಂದಿಗಳ ಕೊರತೆಯಿಂದಾಗಿ, ಈಗಿನ ಸನ್ನಿವೇಶದಲ್ಲಿ ಪ್ರತಿಬಾರಿ ಆನೆಗಳು ನುಗ್ಗಿದಾಗಲೂ ಮಡಿಕೇರಿ ವಿಭಾಗದಿಂದ ಆನೆ ಟ್ರ್ಯಾಕರ್ಗಳನ್ನು ಕರೆಸಿ ನಿರ್ವಹಿಸಲಾಗುತ್ತಿದೆ. ಇದರಿಂದ ಆನೆಗಳ ಹಿಮ್ಮೆ ಟ್ಟಿಸುವ ಕೆಲಸ ತಡವಾಗುತ್ತಿದೆ.


144 ಎನ್ ಕ್ಲೋಸರ್ಗಳು: ಮಂಗಳೂರು ಅರಣ್ಯ ವಿಭಾಗದಲ್ಲಿ ಜನವಸತಿ ಹೊಂದಿರುವ 144 ಎನ್ ಕ್ಲೋಸರ್ಗಳಿವೆ. ಎನ್ ಕ್ಲೋಸರ್ಎಂದರೆ ಸುತ್ತಲೂ ಕಾಡು ಇದ್ದು, ನಡುವೆ ಸಣ್ಣ ಜಾಗದಲ್ಲಿ ಜನರು ವಾಸಿಸುವ ಪ್ರದೇಶ. ಇದರಲ್ಲಿ ಕನಿಷ್ಠ 1 ಕುಟುಂಬದಿಂದ ತೊಡಗಿ ಗರಿಷ್ಠ 10 ಕುಟುಂಬಗಳಿರುವ ನಿದರ್ಶನಗಳಿವೆ. ಇಲ್ಲಿನವರಿಗೆ ಕಾಡಿನ ನಡುವೆ ಹೋಗಲು ರಸ್ತೆ ಬಿಡಲಾಗಿದೆ. ಇದು ಮಾನವ -ಆನೆ ಸಂಘರ್ಷಕ್ಕೆ ಒಂದು ಕಾರಣ.
ರಾಷ್ಟ್ರೀಯ ಹೆದ್ದಾರಿ 73 ಚಾರ್ಮಾಡಿ ಘಾಟಿ, ಎನ್ ಎಚ್ 75 ಶಿರಾಡಿ ಘಾಟಿ, ಎನ್ ಎಚ್ 273 ಮಾಣಿ ಮಡಿಕೇರಿ ಇವೆಲ್ಲವೂ ದಟ್ಟ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತವೆ. ಇವು ಆನೆಗಳ ನೈಸರ್ಗಿಕ ಪಥವೂ ಆಗಿವೆ. ಹೆದ್ದಾರಿ ಅಗಲೀಕರಣ, ಬೇಸಗೆಯಲ್ಲಿ ಕಾಡಿಗೆ ಬೆಂಕಿ ಬೀಳುವುದು ಇವೆಲ್ಲವೂ ಆನೆಗಳ ಸಂಚಾರ ಹೆಚ್ಚಲು ಕಾರಣವಾಗಿದೆ. ಪ್ರಸ್ತುತ ಶಿರಾಡಿ ಘಾಟಿ ಬಳಿಯ ನೀರಕಟ್ಟೆಯಲ್ಲಿ ಬಂಡೆ ಒಡೆಯುವ ಕೆಲಸವಾಗುತ್ತಿದೆ, ಇನ್ನೊಂದೆಡೆ ಹೆದ್ದಾರಿ ಇಕ್ಕೆಲಗಳಲ್ಲಿ ಎತ್ತರವಾದ ಗೋಡೆ ಕಟ್ಟಲಾಗುತ್ತಿದೆ, ಇದರಿಂದಾಗಿ ಆನೆಗಳು ಹೆದ್ದಾರಿ ದಾಟಲಾಗದೆ ಹೊಸ ಪ್ರದೇಶವಾದ ಕೊಕ್ಕಡ ಭಾಗಕ್ಕೆ ಹೋಗುತ್ತಿವೆ ಎನ್ನುವುದು ಅಧಿಕಾರಿಗಳ ಮಾಹಿತಿ.
ಆನೆಗಳು ಅಂದಾಜು ಎಷ್ಟಿವೆ? : ಮಂಗಳೂರು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಅಂದಾಜು 71 ಆನೆಗಳಿರಬಹುದು ಎನ್ನುವ ಲೆಕ್ಕಾಚಾರ ಇಲಾಖೆಯಲ್ಲಿದೆ. ಇದರಲ್ಲಿ ಸುಳ್ಯದ ಆಲೆಟ್ಟಿ ಬಟ್ಟಂಗಾಯ ಗುಂಪಿನಲ್ಲಿ 9 ಆನೆಗಳು, ಪೂಮಲೆ, ಉಬರಡ್ಕ ಮಿತ್ತೂರು ಆಸುಪಾಸಿನಲ್ಲಿ 7 ಆನೆಗಳ ಗುಂಪು, ಸಂಪಾಜೆಯಲ್ಲಿ 9 ಆನೆಗಳ ಗುಂಪು ಕಂಡುಬಂದಿದ್ದರೆ ಬೆಳ್ತಂಗಡಿಯ ಚಾರ್ಮಾಡಿ ಕಡಿರುದ್ಯಾವರ ಭಾಗದಲ್ಲಿ 6 ಆನೆಗಳಿವೆ. ಸುಬ್ರಹ್ಮಣ್ಯ ಕೋಣಾಜೆಯಲ್ಲಿ 5 ಆನೆಗಳ ಗುಂಪು, ಕೊಲ್ಲಮೊಗ್ರು ಕಲ್ಮಕಾರಿನಲ್ಲಿ 4 ಆನೆಗಳ ಗುಂಪು, ಉಪ್ಪಿನಂಗಡಿ ಕಳಂಜ ಶಿಶಿಲದಲ್ಲಿ 3 ಆನೆಗಳು ತಿರುಗಾಡುತ್ತಿವೆ. ಒಟ್ಟಾರೆ ಈ ಎಲ್ಲ ಆನೆಗಳು ಸುಳ್ಯ, ಸುಬ್ರಹ್ಮಣ್ಯ, ಪಂಜ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು ವಲಯಗಳ ವ್ಯಾಪ್ತಿಗೆ ಸೇರಿರುತ್ತವೆ.
