
ಕಡಬ: ಯಾವುದೋ ಕಾರಣಕ್ಕೆ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನ.26 ಮುಂಜಾನೆ ವರದಿಯಾಗಿದೆ.


ಕಡಬದ ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ರಾಕೇಶ್ ಕೆ.ಎಸ್ (37 ವ) ಮೃತ ದುರ್ದೈವಿ.
ನ.19 ರಂದು ಸಂಜೆ ಕಡಬ ಬಜಾಜ್ ಶೋ ರೂಂ ಹಿಂದುಗಡೆ ಅಮಲು ಪದಾರ್ಥದೊಂದಿಗೆ ಇಲಿಪಾಷಾನ ಸೇವಿಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದ. ಅಸ್ವಸ್ಥಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ನ.26ರಂದುಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಆತನ ಪತ್ನಿಯೊಂದಿಗೆ ಆತನ ಗೆಳೆಯನೊಬ್ಬ ಮೊಬೈಲ್ ಪೋನ್ ಮೂಲಕ ಸಂಪರ್ಕದಲ್ಲಿರುವ ವಿಷಯ ತಿಳಿದು ತೀವ್ರ ನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮೃತ ಯುವಕನ ತಂದೆ ಸೊಲೊಮೊನ್ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸು ಠಾಣೆಯಲ್ಲಿ ಯುಡಿಆರ್ ನಂ: 35/2025 ಕಲಂ:194 (3) (iv) BNSS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


ಜಿಮ್ ಮಾಲಕನ ಪೋಟೊ ವೈರಲ್: ಈ ಘಟನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳುಹಿಸಿದ್ದರು ಎನ್ನಲಾಗಿದೆ. ನಂತರದ ಬೆಳವಣಿಗೆಯಲ್ಲಿ ಕಡಬದ ಜಿಮ್ ಮಾಲಕನೊಬ್ಬನ ಪೋಟೋ ಬಂಧನ ಶೀರ್ಷಿಕೆಯಡಿ ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಪೊಲೀಸರಲ್ಲಿ ಮಾಹಿತಿ ಪಡೆದಾಗ ಈ ಘಟನೆಗೆ ಸಂಬಂಧಿಸಿ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲ,ವಿಚಾರಣೆಗಾಗಿ ಕರೆಸಿದ್ದೆವು ಎಂದು ತಿಳಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿ ಮಾತುಕತೆ ,ಹೊಡೆದಾಟದ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು. ಮಾಹಿತಿಯ ಪ್ರಕಾರ ಮೃತ ಯುವಕ ತನ್ನ ಹೇಳಿಕೆಯಲ್ಲಿ ಮತ್ತು ಪೊಲೀಸರಿಗೆ ದೂರು ನೀಡಿದ ಮೃತರ ತಂದೆ ವ್ಯಕ್ತಿಯೊಬ್ಬರ ಹೆಸರು ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಪೊಲೀಸರ ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬರಬೇಕಿದೆ.
