
ಕಡಬ: ಭಾರೀ ಗಾಳಿ ಮಳೆಗೆ ಕಡಬ ಮುಖ್ಯ ಪೇಟೆಯ ಚರಂಡಿಗಳಲ್ಲಿ ಸಮರ್ಪಕವಾಗಿ ಹರಿದು ಹೋಗದ ಕಾರಣ ಅಂಗಡಿಗಿಗಳಿಗೆ ಮತ್ತು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಅ.22 ರ ಸಂಜೆ ವರದಿಯಾಗಿದೆ.


ಮುಖ್ಯ ಪೇಟೆಯಲ್ಲಿರುವ ಕೆಲ ಅಂಗಡಿಗಳಿಗೆ ನೀರು ನುಗ್ಗಿದ್ದು ವಸ್ತುಗಳನ್ನು ಸ್ಥಳಾಂತರಿಸಲು ಹರಸಾಹಸ ಪಟ್ಟಿದ್ದಾರೆ. ಇನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾಲೇಜು ರಸ್ತೆಯ ಅಡ್ಡಗದ್ದೆಯಲ್ಲಿ ರಸ್ತೆಯಲ್ಲೇ ನೀರು ಹರಿದು ಹೋಗಿದ್ದು ವಾಹನ ಸವಾರರು ಪರದಾಡಿದ್ದಾರೆ.
ಸಮುದಾಯ ಆಸ್ಪತ್ರೆಯ ಬಳಿಯ ಮನೆಯೊಂದಕ್ಕೂ ಚರಂಡಿ ನೀರು ನುಗ್ಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ವ್ಯಾಪಾರ –ವ್ಯವಹಾರಕ್ಕಾಗಿ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಭಾರೀ ಮಳೆಗೆ ಅಸ್ತವ್ಯಸ್ಥವಾಗಿದೆ.ಖರೀದಿಗಾಗಿ ಪೇಟೆಗೆ ಆಗಮಿಸಿದ ಜನರು ಸಂಕಷ್ಟಕ್ಕೆ ಒಳಗಾದರು. 


ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸದ ಕಾರಣ ಹೆಚ್ಚು ಮಳೆ ಬಂದಾಗ ಬ್ಲಾಕ್ ಆಗಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಮುಖ್ಯ ರಸ್ತೆಯಲ್ಲಿರುವ ಕೆಲ ಚರಂಡಿಗಳನ್ನು ಇನ್ನೂ ಅಭಿವೃದ್ದಿ ಪಡಿಸಿಲ್ಲ .ಕೆಲವು ಕಡೆ ಚರಂಡಿಗಳನ್ನು ಮೇಲ್ಬಾಗದಲ್ಲಿ ಸರಿಪಡಿಸಿದರೂ ಸ್ಲಾಬ್ ಗಳನ್ನು ತೆಗೆದು ನಿರ್ವಹಣೆ ಮಾಡದಿರುವುದೇ ರಸ್ತೆಯಲ್ಲಿ ನೀರು ಹರಿಯಲು ಕಾರಣವಾಗಿದೆ .
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಅ.29ರ ವರೆಗೆ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
