
ಕಡಬ ಟೈಮ್ಸ್, ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಮೀರಿ ಜನ ಆಗಮಿಸಿದ ಕಾರಣ ಜನ ಸಂದಣಿಯ ನಡುವೆ ಸಿಲುಕಿ ಕೆಲವು ಮಂದಿ ಅಸ್ವಸ್ಥರಾಗಿದ್ದರು. ಊಟ,ನೀರು, ಗಿಪ್ಟ್ ಸರಿಯಾದ ಸಮಯಕ್ಕೆ ಸಿಗದೆ ಪರದಾಡಿದ್ದರು.


ಈ ಪೈಕಿ ಕೆಲವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೈಕಿ ಕಡಬ ಕೋಟೆಗುಡ್ಡೆಯ ನಿವಾಸಿ ಬಾಲಕೃಷ್ಣ ಅವರ ಪತ್ನಿ ಲೀಲಾವತಿ(53ವ) ಮತ್ತು ಮೊಮ್ಮಕ್ಕಳೊಂದಿಗೆ ಬಂದಿದ್ದ ಬೆಳ್ಳಾರೆ ನಿವಾಸಿ ಬೀಫಾತಿಮಾ (60ವ) ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಅ.21ರ ಮಧ್ಯಾಹ್ನದ ಒಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಅ.20ರಂದು ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಬಿಲ್ ಅನ್ನು ಶಾಸಕ ಅಶೋಕ್ ರೈ ಅವರೇ ಭರಿಸಿದ್ದಾರೆ.


ಮಾಹಿತಿ ತಿಳಿದು ಆಸ್ಪತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ಮಾಡಿ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯರಿಬ್ಬರ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರಸಭೆ ಸದಸ್ಯೆ ದೀಕ್ಷಾ ಪೈ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು
