

![]() ![]() |
ಕುಮಾರಧಾರ ನದಿಯಲ್ಲಿ ದೇವರ ಮೀನುಗಳ ಸಮೂಹ |


ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಚಂಪಾಷಷ್ಠಿ ಮಹೋತ್ಸವ ಸಂಭ್ರಮದಲ್ಲಿದೆ. ರಾಮ–ಲಕ್ಷ್ಮಣ ಎನ್ನುವ ಎರಡು ಜೋಡಿ ಕೊಪ್ಪರಿಗೆ ಬರುವ ಮೂಲಕ ಬುಧವಾರ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದೆ. ಇಲ್ಲಿನ ಜಾತ್ರೆ ಹಲವಾರು ವಿಶೇಷಗಳನ್ನು ಒಳಗೊಂಡಿದ್ದು ಅದರಲ್ಲಿ ಜಾತ್ರೆ ನೋಡಲು ಬರುವ ವಿಶೇಷ ಅತಿಥಿಗಳಾದ ದೇವರ ಮೀನುಗಳು ಒಂದಾಗಿದೆ.
ಕುಕ್ಕೆ ಕ್ಷೇತ್ರಕ್ಕೆ
ಆಗಮಿಸಿದ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆಯುವುದು ರೂಢಿ. ಕುಮಾರಧಾರ ಸ್ತಾನ ಘಟ್ಟದ ಬಳಿ ವರ್ಷ ಪೂರ್ತಿಯಾಗಿ ಇಲ್ಲಿ ಬೇರೆ ಬೇರೆ ಮೀನುಗಳಿದ್ದರೂ, ಜಾತ್ರೆಯ ಸಂದರ್ಭದಲ್ಲಿ ವಿಶೇಷವಾಗಿ ದೇವರ ಮೀನುಗಳ ಹೆಚ್ಚಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತವೆ.


ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಏನೆಕಲ್ಲು ಶಂಕವಾಲ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದಿಂದ
ಮೀನುಗಳು ಇಲ್ಲಿಗೆ ಬರುತ್ತದೆ. ಜಾತ್ರೆ ಮುಗಿಯುವವರೆಗೆ ಇಲ್ಲೇ ಇರುತ್ತವೆ ಎಂಬ ನಂಬಿಕೆ ಇದೆ. ಜಾತ್ರೋತ್ಸವ ಕೊನೆಯಲ್ಲಿ ನಡೆಯುವ ಕೋಲದ ವೇಳೆ ದೈವವು ಸ್ನಾನ ಘಟಕ್ಕೆ ಬಂದು ಮೀನುಗಳಿಗೆ ನೈವೇದ್ಯ ಹಾಕಿದ ಬಳಿಕ ಇಲ್ಲಿನ ಮೀನುಗಳು ಬಂದಲ್ಲಿಗೆ ಮರಳುತ್ತವೆ ಎನ್ನುವುದು
ನಂಬಿಕೆಯಾಗಿದೆ.
ಜಾತ್ರೆ ಸಂದರ್ಭದಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡುವವರಿಗೆ ದೇವರ ಮೀನುಗಳು ಕಚಗುಳಿ ಇಡುತ್ತವೆ. ದೇವರ ಮೀನುಗಳೆಂದು ಕರೆಯಲ್ಪಡುವ ಇವುಗಳನ್ನು ಯಾರೂ ಹಿಡಿಯುವಂತಿಲ್ಲ ಭಕ್ತರು ಅವುಗಳಿಗೆ ಆಹಾರ ಸಮರ್ಪಿಸಿ ಸಂತಸ ಪಡುತ್ತಾರೆ. ಅಲ್ಲದೆ ಜಾತ್ರೆಯ ಬ್ರಹ್ಮರಥೋತ್ಸವ ಮರುದಿನ ಶ್ರೀ ದೇವರ ಅವತೋತ್ಸವ ಕೂಡ ಕುಮಾರಧಾರ ನದಿಯಲ್ಲಿ ನಡೆಯುತ್ತದೆ. ಮೀನುಗಳ ಈ ನಡವಳಿಕೆಗೆ ನೈಸರ್ಗಿಕ ಕಾರಣಗಳಿದ್ದರೂ ಇರಬಹುದು. ಆದರೆ ಜಾತ್ರೆ ವೇಳೆ ಬರುವುದಂತೂ ಸತ್ಯ ಎನ್ನುವುದರಲ್ಲಿ
ಎರಡು ಮಾತಿಲ್ಲ.

