
ಕಡಬ ಟೈಮ್ಸ್, ಪ್ರಮುಖ ಸುದ್ದಿ : ಸ್ಥಳೀಯಾಡಳಿತದ ಅನುಮತಿ ಪಡೆಯದೆ ಅಕ್ರಮವಾಗಿ ಟಿಪ್ಪರ್ ನಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದ ವೇಳೆ ಪ್ರಶ್ನಿಸಿದ ಪತ್ರಕರ್ತನ ವಿರುದ್ದ ಜೆಸಿಬಿ ಚಾಲಕ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ( ಕಲಂ-126(2),352,351(3) BNS) ಪ್ರಕರಣ ದಾಖಲಾಗಿತ್ತು.


ಇದೀಗ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ವಾರೆಂಟ್ ಹೊರಡಿಸಿದ್ದು ನ್ಯೂಸ್ ಅಪ್ ಡೇಟ್ ವೆಬ್ ಸೈಟ್ ನಿರ್ವಾಹಕ, ಯುವ ಪತ್ರಕರ್ತ ಗಣೇಶ್ ಇಡಾಳ ಅವರನ್ನು ಅ.1 ರಂದು ಪೊಲೀಸರು ವಶಕ್ಕೆ ಪಡೆದು ಠಾಣಾ ಬಂದಿಕಾನೆಯಲ್ಲಿ ಇರಿಸಿ ಅ. 2 ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯವು ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಅ.3 ರಂದು ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಹೆಸರಾಂತ ಹಿರಿಯ ವಕೀಲ ಕೇಶವ ಭೀಮಗುಳಿ, ಶ್ರೀ ಈಶ , ವೆಂಕಟ ಕೃಷ್ಣ ಭೀಮಗುಳಿ ವಾದ ಮಂಡಿಸಿದರು.
ಪೋಟೊ ತೆಗೆಯಲು ಹೋದ ಯುವಕ ವಶಕ್ಕೆ :ಪತ್ರಕರ್ತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದುಕೊಂಡು ಹೋಗುವ ವೇಳೆ ಕಡಬ ಮುಖ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಆರೋಪಿಯಾಗಿರುವ ಪತ್ರಕರ್ತನಿಗೆ ಕೈಗೆ ಕೋಳ ತೊಡಿಸಿಕೊಂಡು ಪೇಟೆಯಲ್ಲಿ ಸುತ್ತಾಡಿಸಿದ ಬಗ್ಗೆ ಸುದ್ದಿ ಹಬ್ಬಿದ ಹಿನ್ನೆಲೆ ಆಪ್ತರೊಬ್ಬರು ಪೋಟೋ ತೆಗೆಯಲು ಮುಂದಾಗಿದ್ದರು. ಇದನ್ನು ಗಮನಿಸಿದ ಪೊಲೀಸರು ಯುವನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಂಡು ಹೋಗಿದ್ದಾರೆ. ಯುವಕನನ್ನು ವಿಚಾರಣೆ ನಡೆಸಿ ಮೊಬೈಲ್ ನಲ್ಲಿದ್ದ ಪೋಟೊ ಡಿಲಿಟ್ ಮಾಡಿಸಿದ್ದಾರೆ ಎನ್ನಲಾಗಿದೆ.


ಹೈ ವೊಲ್ಟೇಜ್ ಸುದ್ದಿಗಳು : ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕ, ಅಕ್ರಮ ಮರಳು, ಮಣ್ಣು ಸಾಗಾಟ ಸೇರಿದಂತೆ ಅಕ್ರಮಗಳ ವಿರುದ್ದ ಗಣೇಶ್ ಇಡಾಳ ತಮ್ಮದೇ ಶೈಲಿಯಲ್ಲಿ ಆಗಾಗ ಸುದ್ದಿ ಪ್ರಕಟಿಸಿ ಮೇಲಾಧಿಕಾರಿಗಳ ಗಮನ ಸೆಳೆದಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಯನ್ನು ಜೈಲುಗಟ್ಟುವಲ್ಲಿಯೂ ಇವರು ಪ್ರಕಟಿಸಿದ ಸುದ್ದಿ ಪ್ರಮುಖವಾಗಿತ್ತು.ಜನ ನಾಯಕರ ವಿರುದ್ದವೂ ಎಚ್ಚರಿಕೆಯ ಬರಹಗಳನ್ನು ಬರೆದು ಹಲವರ ಕೆಂಗಣ್ಣಿಗೂ ಗುರಿಯಾಗಿದ್ದರು.
