ಕಡಬ:ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಬಸ್ ಚಾಲಕ ಹಾಗೂ ಕಾರು ಚಾಲಕನ ನಡುವೆ ವಾಗ್ವಾದ

​ಕಡಬ: ಕಡಬ ಗ್ರಾಮದ ಪೆಲತ್ತೋಡಿ ಎಂಬಲ್ಲಿ ಶಾಲಾ ವಾಹನ ಹಾಗೂ ಕಾರಿನ ನಡುವೆ ರಸ್ತೆಯಲ್ಲಿ ಸೈಡ್ ಕೊಡುವ ವಿಚಾರವಾಗಿ ಉಂಟಾದ ವಾಗ್ವಾದ ತಾರಕಕ್ಕೇರಿ, ಪರಸ್ಪರ ಹಲ್ಲೆ ಹಾಗೂ ಜೀವಬೆದರಿಕೆಯಲ್ಲಿ ಅಂತ್ಯಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಪ್ರತ್ಯೇಕವಾಗಿ ಕಡಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ದೂರು-ಪ್ರತಿದೂರುಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

kadaba times

​ಸಲ್ಮಾನ್ ಫಾರೀಸ್ ನೀಡಿದ ದೂರಿನ ವಿವರ (ಅ.ಕ್ರ: 125/2026): ತಿಮರಡ್ಡ ಮನೆ ನಿವಾಸಿ ಸಲ್ಮಾನ್ ಫಾರೀಸ್ (30) ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 29ರಂದು ಬೆಳಿಗ್ಗೆ ಸುಮಾರು 8:15ರ ವೇಳೆಗೆ ತಮ್ಮ ಅಣ್ಣನ ಕಾರಿನಲ್ಲಿ ಅಣ್ಣನ 7 ವರ್ಷದ ಪುತ್ರಿಯನ್ನು  ಮದರಸದಿಂದ ಕರೆದುಕೊಂಡು ಮನೆಗೆ ಮರಳುತ್ತಿದ್ದರು.

​ಪೆಲತ್ತೋಡಿ ಬಳಿ ತಲುಪಿದಾಗ ಎದುರಿನಿಂದ ಶಾಲಾ ವಾಹನವನ್ನು ಚಲಾಯಿಸಿಕೊಂಡು ಬಂದ ಚಂದ್ರಶೇಖರ ಕರ್ಕೇರ ಎಂಬವರು ರಸ್ತೆಗೆ ಬಸ್ಸನ್ನು ಅಡ್ಡಲಾಗಿ ನಿಲ್ಲಿಸಿ, ಕಾರನ್ನು ಬಲಗಡೆ ಮೇಲಕ್ಕೆ ಕೊಂಡೊಯ್ದು ಜಾಗ ಬಿಡುವಂತೆ ತಿಳಿಸಿದರು. ಕಾರನ್ನು ಇನ್ನಷ್ಟು ಮೇಲಕ್ಕೆ ತೆಗೆದುಕೊಳ್ಳುವಂತೆ ಹೇಳಿದಾಗ, “ಬಸ್ಸು ಹೋಗಲು ಸಾಕಷ್ಟು ಜಾಗವಿದೆ, ನೀವು ಹೋಗಿ” ಎಂದು ಸಲ್ಮಾನ್ ತಿಳಿಸಿದರು. ಇದರಿಂದ ಕೆರಳಿದ ಚಂದ್ರಶೇಖರ ಕರ್ಕೇರ ಅವರು ಬಸ್ಸಿನಿಂದ ಕೆಳಗಿಳಿದು ಬಂದು, ಕಾರಿನಲ್ಲಿದ್ದ ಸಲ್ಮಾನ್ ಅವರ ಕುತ್ತಿಗೆಯನ್ನು ಒತ್ತಿ ಹಿಡಿದು ಕೆಳಕ್ಕೆ ಎಳೆದು ಹಾಕಿ, ಕೈಯಲ್ಲಿದ್ದ ವಾಹನದ ಕೀಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

​ಇದನ್ನು ಕಂಡು ಭಯದಿಂದ ಅಳುತ್ತಾ ಓಡಿಬಂದ 7 ವರ್ಷದ ಬಾಲಕಿಯ ಎಡ ಕೆನ್ನೆಗೆ ಹೊಡೆದು, ಆಕೆಯ ಬಟ್ಟೆ ಹಿಡಿದು ಎತ್ತಿ ಬಿಸಾಡಿದ್ದಲ್ಲದೆ, ಸಲ್ಮಾನ್ ಅವರ ಎದೆಗೆ ಗುದ್ದಿ, “ಎರಡು ದಿನದಲ್ಲಿ ನಿನ್ನ ಮದುವೆ ಇದೆಯಲ್ಲ, ಎಲ್ಲಿಗೆ ಹೋಗ್ತಿಯಾ, ಜೀವ ಸಹಿತ ಬಿಡುವುದಿಲ್ಲ” ಎಂದು ಪ್ರಾಣಬೆದರಿಕೆ ಒಡ್ಡಿದ್ದಾರೆ ಎಂದು ಸಲ್ಮಾನ್ ಫಾರೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಅನ್ವಯ ಆರೋಪಿ ಚಂದ್ರಶೇಖರ ಕರ್ಕೇರ ವಿರುದ್ಧ ಅಪರಾಧ ಕ್ರಮಾಂಕ 125/2026 ರಲ್ಲಿ ಬಿಎನ್‌ಎಸ್ ಕಲಂ 126(2), 115(2), 118(1), 352, 351(2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

uniq
kadaba times

​ಚಂದ್ರಶೇಖರ ಕರ್ಕೇರ ನೀಡಿದ ಪ್ರತಿದೂರಿನ ವಿವರ (ಅ.ಕ್ರ: 126/2026): ಇನ್ನೊಂದೆಡೆ, ಪೆಲತ್ತೋಡಿ ನಿವಾಸಿ, ಶ್ರೀ ವೇದವ್ಯಾಸ ವಿದ್ಯಾಲಯದ ಶಾಲಾ ಬಸ್ ಚಾಲಕ ಚಂದ್ರಶೇಖರ ಕರ್ಕೇರ (57) ಅವರು ನೀಡಿದ ದೂರಿನ ಪ್ರಕಾರ, ಎಂದಿನಂತೆ ಬೆಳಿಗ್ಗೆ 8:15ರ ವೇಳೆಗೆ ಶಾಲಾ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪೆಲತ್ತೋಡಿ ಎಂಬಲ್ಲಿ ತಿಮ್ಮರಡ್ಡ ನಿವಾಸಿ ಆದಂ ಅವರ ಪುತ್ರ ಪ್ಯಾರಿಸ್  ಎಂಬಾತ ತನ್ನ ಕಾರನ್ನು ಶಾಲಾ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ್ದಾನೆ.

​ಬಳಿಕ ಪ್ಯಾರಿಸ್  ಇತರರು ಸೇರಿಕೊಂಡು ತನ್ನನ್ನು ವಾಹನದಿಂದ ಕೆಳಕ್ಕೆ ಎಳೆದು ಹಾಕಿ, ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, “ಇಂದು ಸಂಜೆಯೊಳಗೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನನ್ವಯ ಪ್ಯಾರಿಸ್, ಶರೀಫ್, ಫಾರೂಕ್, ಆದಂ ಹಾಗೂ ಇತರರ ವಿರುದ್ಧ ಅಪರಾಧ ಕ್ರಮಾಂಕ 126/2026 ರಲ್ಲಿ ಬಿಎನ್‌ಎಸ್ ಕಲಂ 126(2), 115(2), 352, 351(2), r/w 3(5) ಅಡಿಯಲ್ಲಿ ಕೌಂಟರ್ ಕೇಸ್ ದಾಖಲಿಸಲಾಗಿದೆ.

ಒಂದೇ ಘಟನೆಯ ಕುರಿತು ಎರಡೂ ಕಡೆಯವರಿಂದ ಪರಸ್ಪರ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಕಡಬ ಠಾಣಾ ಪೊಲೀಸರು ಎರಡೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ ಸ್ಥಳ ಮಹಜರು ಹಾಗೂ ತನಿಖಾ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದಾರೆ.

Related Articles

Latest Articles