
ಕಡಬ ಟೈಮ್ಸ್, ಸವಣೂರು: ಸಹಕಾರ ರತ್ನ ಸವಣೂರು ಸೀತಾರಾಮ ರೈ ಯವರಿಗೆ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗಾಂಧಿ ಚಿಂತನಾ ವೇದಿಕೆಯ ಪದಾಧಿಕಾರಿಗಳು ಸೆ. 27 ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.


ಸುಳ್ಯ ಗಾಂಧಿ ಚಿಂತನಾ ವೇದಿಕೆ ವತಿಯಿಂದ ಅ. 2 ರಂದು ಸುಳ್ಯದಲ್ಲಿ ಗಾಂಧಿ ನಡಿಗೆ ನಡೆಯಲಿದ್ದು ಆ ಸಂದರ್ಭ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.ವೇದಿಕೆಯ ಪ್ರಧಾನ ಸಂಚಾಲಕ ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ರವರು ಮಾತನಾಡಿ ”ವರ್ಷಂಪ್ರತಿ ವೇದಿಕೆ ವತಿಯಿಂದ ಅಕ್ಟೋಬರ್ 2 ರಂದು ಆಚರಿಸಿಕೊಂಡು ಬರುತ್ತಿರುವ ಗಾಂಧಿ ನಡಿಗೆ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಈ ಬಾರಿ ಗಾಂಧಿ ಚಿಂತನ ವೇದಿಕೆ ವತಿಯಿಂದ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿದ್ದು ಇದಕ್ಕೆ ಶಿಕ್ಷಣ ಶಿಲ್ಪಿ ಹಾಗೂ ಸಹಕಾರ ರತ್ನ ಸವಣೂರು ಸೀತಾರಾಮ ರೈ ಯವರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯು ಸಮಿತಿಯ ಸದಸ್ಯರುಗಳಲ್ಲದೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬೇರೆ ಬೇರೆ ಸಾಧಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಾಡಲಾಗಿದೆ ಎಂದರು.
ಅಂದು ಬೆಳಿಗ್ಗೆ ಜ್ಯೋತಿ ವೃತ್ತದಿಂದ ಗಾಂಧಿ ನಡಿಗೆ ಆರಂಭಗೊಳ್ಳಲಿದ್ದು ಈ ನಡಿಗೆಯಲ್ಲಿ ಸುಳ್ಯದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಮುಖ್ಯರಸ್ತೆಯಲ್ಲಿ ಗಾಂಧಿ ನಡಿಗೆ ಸಾಗಿ ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆಗೈದು ರಥಬೀದಿ ಮೂಲಕ ಸಾಗಿ ಚೆನ್ನಕೇಶವ ದೇವಸ್ಥಾನದ ಬಳಿಯಿರುವ ಶಾರದಾಂಬಾ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ” ಎಂದು ಹರೀಶ್ ಬಂಟ್ವಾಳ್ ತಿಳಿಸಿದರು.


ವೇದಿಕೆಯ ಸಂಚಾಲಕರಾದ ಡಾ.ಸುಂದರ ಕೇನಾಜೆಯವರು ಮಾತನಾಡಿ ” ಗಾಂಧೀಜಿಯ ಚಿಂತನೆಗಳನ್ನು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯರನ್ನು ಗೌರವಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಈ ಬಾರಿ ವೇದಿಕೆಯ ವತಿಯಿಂದ ನಡೆಯಲಿದೆ. ಗಾಂಧೀಜಿಯವರ ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಸರಳ ಸಜ್ಜನಿಕೆಯ ವ್ಯಕ್ತಿ ಸವಣೂರು ಸೀತಾರಾಮರ ರೈಯವರ ಸಾಧನೆಯ ಹಾದಿಯನ್ನು ಗೌರವಿಸಿ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕರುಗಳಾದ ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು, ನ.ಪಂ.ಸದಸ್ಯ ಶರೀಫ್ ಕಂಠಿ, ಶಂಕರ್ ಪೆರಾಜೆ ಉಪಸ್ಥಿತರಿದ್ದರು.
