
ಕಡಬ ತಾಲೂಕಿನ ಆಲಂತಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ (ಎನ್ಎಸ್ಎಸ್) ಘಟಕದ 2026–27ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುಮಾರ್ ಪಾಲೇರಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಗ್ರಾಮೀಣ ಜನರ ಮತ್ತು ಹಿರಿಯರ ಒಡನಾಟದಿಂದ ಯುವಜನರು ಉತ್ತಮ ಜ್ಞಾನ ಹಾಗೂ ಅನುಭವ ಗಳಿಸಲು ಸಾಧ್ಯ ಎಂದು ಕರೆ ನೀಡಿದರು.


ರಾಮಕುಂಜ:“ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಸೇವಾ ಮನೋಭಾವ, ಶಿಸ್ತು, ಸಂಯಮ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನಾ (ಎನ್ಎಸ್ಎಸ್) ಶಿಬಿರಗಳು ಅತ್ಯಂತ ಸಹಕಾರಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಆಧುನಿಕತೆಯತ್ತ ಆಕರ್ಷಿತವಾಗುತ್ತಿರುವುದು ತಪ್ಪಲ್ಲ, ಆದರೆ ಹಳ್ಳಿಯ ಜನರ ಹಾಗೂ ಹಿರಿಯರ ಒಡನಾಟದಿಂದ ಯುವಜನರು ಜೀವನದ ನೈಜ ಜ್ಞಾನ ಮತ್ತು ಅನುಭವವನ್ನು ಸಂಪಾದಿಸಬೇಕು. ಇದರಿಂದ ಅವರ ಸರ್ವಾಂಗೀಣ ಅಭಿವೃದ್ಧಿ ಖಂಡಿತವಾಗಿಯೂ ಸಾಧ್ಯ” ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅಕ್ಟೋಬರ್ 11ರಂದು ಆಲಂತಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2026–27ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಬಿರವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅಜಿತ್ ಕುಮಾರ್ ಪಾಲೇರಿ ಅವರು ದೀಪ ಪ್ರಜ್ವಲಿಸಿ ವಿದ್ಯುಕ್ತವಾಗಿ ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜಿನ ರಕ್ಷಕ–ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಧವಳಗಿರಿ ಕನ್ಸ್ಟ್ರಕ್ಷನ್ನ ಸಿವಿಲ್ ಇಂಜಿನಿಯರ್ ಮನೋಹರ ಹಾಗೂ ನಿವೃತ್ತ ಶಿಕ್ಷಕಿ ರಾಜೇಶ್ವರಿ ಅವರು ಶಿಬಿರದ ಯಶಸ್ಸಿಗೆ ಶುಭ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಸೌತಡ್ಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಶಾಂತ್ ರೈ ಅರಂತಬೈಲು, ಆಲಂತಾಯ ಶಾಲೆಯ ಮುಖ್ಯಗುರು ಲವ್ಲಿ ಜೋಸ್, ಶಿಬಿರ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಸಿ.ಬಿ., ಎನ್ಎಸ್ಎಸ್ ಘಟಕದ ನಾಯಕ ಪ್ರೀತಮ್ ಹಾಗೂ ನಾಯಕಿ ಪ್ರೈಷಿಕಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಹಾಗೂ ಶಿಬಿರದ ಮಾರ್ಗದರ್ಶಕರಾದ ಚಂದ್ರಶೇಖರ ಕೆ. ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಎನ್ಎಸ್ಎಸ್ ಯೋಜನಾಧಿಕಾರಿ ಕೀರ್ತನ್ ಬಿ.ಜಿ. ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಲೋಹಿತ್ ಕುಮಾರ್ ವಂದಿಸಿದರು. ಜನನಿ ಮತ್ತು ಬಳಗದವರು ಪ್ರಾರ್ಥಿಸಿದರು. ಸಹ ಶಿಬಿರಾಧಿಕಾರಿ ಪ್ರಮೀಳಾ ಹಾಗೂ ಉಪನ್ಯಾಸಕ ತಿಲಕಾಕ್ಷ ಕಾರ್ಯಕ್ರಮ ನಿರೂಪಿಸಿದರು.
