
ಕಡಬ ತಾಲೂಕಿನ ಆಲಂಕಾರು ಗ್ರಾಮದ ಕೇಪುಳು ಎಂಬಲ್ಲಿ ನಡೆದಿದೆ ಎನ್ನಲಾದ ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಲ್ಯ ಗ್ರಾಮದ ಪುತ್ತಿಲ ನಿವಾಸಿ ಅನುರಾಧ ಪಿ. ಅವರನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೋಷಮುಕ್ತಗೊಳಿಸಿ (ಖುಲಾಸೆಗೊಳಿಸಿ) ಮಹತ್ವದ ತೀರ್ಪು ನೀಡಿದೆ. ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ಮಾಡಿದೆ.


ಕಡಬ / ಪುತ್ತೂರು:ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಯಾಗಿದ್ದ ಬಲ್ಯ ಗ್ರಾಮದ ಪುತ್ತಿಲ ನಿವಾಸಿ ಅನುರಾಧ ಪಿ. ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
2018ರ ಪ್ರಕರಣದ ಹಿನ್ನೆಲೆ:ದಿನಾಂಕ 23 ಜನವರಿ 2018 ರಂದು ಕಡಬ ತಾಲೂಕು ಆಲಂಕಾರು ಗ್ರಾಮದ ಕೇಪುಳು ಮನೆ ಎಂಬಲ್ಲಿ ರಾಘವ ಎಂಬವರಿಗೆ ಜಾತಿ ಹಿಡಿದು ನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಲಾಗಿದೆ ಎಂದು ಆರೋಪಿಸಿ ಅನುರಾಧ ಪಿ. ಅವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಪೂರ್ಣಗೊಳಿಸಿದ ಕಡಬ ಪೊಲೀಸರು, ಆರೋಪಿ ಅನುರಾಧ ವಿರುದ್ಧ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್ ಕೇಸ್ ನಂ. 5007/2018 ರಲ್ಲಿ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದರು.


13 ಸಾಕ್ಷಿಗಳ ವಿಚಾರಣೆ – ಆರೋಪ ಸಾಬೀತಾಗದೆ ಖುಲಾಸೆ:ಪ್ರಕರಣದ ಸುದೀರ್ಘ ನ್ಯಾಯಾಂಗ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಒಟ್ಟು 13 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತು. ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ (ಅಭಿಯೋಗ) ಪರವಾಗಿ ಆರೋಪಿಯ ಮೇಲಿನ ಆರೋಪಗಳನ್ನು ಸೂಕ್ತ ಪುರಾವೆಗಳೊಂದಿಗೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.
ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿ ಅನುರಾಧ ಪಿ. ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಆರೋಪಿ ಅನುರಾಧ ಪಿ. ಅವರ ಪರವಾಗಿ ಖ್ಯಾತ ವಕೀಲರಾದ ಲೋಕೇಶ್ ಎಂ.ಜಿ. ಕೋಣಾಜೆ ಮಾಲ, ಕೃಷ್ಣಪ್ಪ ಗೌಡ ಕಕ್ಷೆ, ವಿನಯ ಎಂ.ಕೆ. ಕಳುವಾಜೆ ಹಾಗೂ ಕವನ ಯೇನೆಕಲ್ಲು ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
