
ಕಡಬ ತಾಲೂಕಿನ ಕೇಪು ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲದ ಮುಂದಿನ ಎರಡು ವರ್ಷಗಳ ಅವಧಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಕ್ಟೋಬರ್ 2 ರಂದು ಶುಕ್ರವಾರ ಕೇಪು ಸಭಾಭವನದಲ್ಲಿ ವೈಭವದಿಂದ ನೆರವೇರಿತು. ನೂತನ ಅಧ್ಯಕ್ಷರಾಗಿ ದೀಕ್ಷಿತ್ ಹಳ್ಳಿಮನೆ ಹಾಗೂ ಕಾರ್ಯದರ್ಶಿಯಾಗಿ ಶ್ರೇಯತ್ ನಂದುಗುರಿ ಆಯ್ಕೆಯಾಗಿದ್ದಾರೆ.


ಕಡಬ / ಕೇಪು: ಗ್ರಾಮೀಣ ಭಾಗದಲ್ಲಿ ಸಮಾಜಮುಖಿ ಹಾಗೂ ಜನಪರ ಸೇವೆಗಳ ಮೂಲಕ ಗುರುತಿಸಿಕೊಂಡಿರುವ ಕಡಬ ತಾಲೂಕಿನ ಕೇಪು ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲದ ಮುಂದಿನ ಎರಡು ವರ್ಷಗಳ ಅವಧಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಕ್ಟೋಬರ್ 2 ರಂದು ಶುಕ್ರವಾರ ಕೇಪುವಿನ ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಕಡಬದ ಯುವ ಉದ್ಯಮಿ ದಯಾನಂದ ಗೌಡ ಆರಿಗ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಪುನೀತ್ ದೇಂತಾರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀಕೃಷ್ಣ ಎಂ.ಆರ್. ಭಾಗವಹಿಸಿ ಮಾತನಾಡಿದರು.
ನೂತನ ಪದಾಧಿಕಾರಿಗಳ ಆಯ್ಕೆ :ಮುಂದಿನ ಎರಡು ವರ್ಷಗಳ (2026–2028) ಅವಧಿಗೆ ಯುವಕ ಮಂಡಲವನ್ನು ಮುನ್ನಡೆಸಲು ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಅಧ್ಯಕ್ಷರು: ದೀಕ್ಷಿತ್ ಹಳ್ಳಿಮನೆ,ಉಪಾಧ್ಯಕ್ಷರು: ತೀರ್ಥೇಶ್ ಮೀನಾಡಿ,ಕಾರ್ಯದರ್ಶಿ: ಶ್ರೇಯತ್ ನಂದುಗುರಿ,ಕೋಶಾಧಿಕಾರಿ: ಪ್ರವೀಣ್ ದೋಲ,ಕ್ರೀಡಾ ಸಮಿತಿ ಸಂಚಾಲಕರು: ಹರ್ಷಿತ್ ಹಳ್ಳಿಮನೆ,ಸಾಂಸ್ಕೃತಿಕ ಸಮಿತಿ ಸಂಚಾಲಕರು: ರೋಹಿತ್ ಹಳ್ಳಿ


ಸಮಾಜಮುಖಿ ಸೇವೆಯ ಹೆಜ್ಜೆಗುರುತು: ಕಳೆದ ಒಂದು ದಶಕದಿಂದ (10 ವರ್ಷಗಳು) ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲವು ತನ್ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಬಡ ಮತ್ತು ನಿರ್ಗತಿಕ ಕುಟುಂಬವೊಂದಕ್ಕೆ ಸುಮಾರು ₹10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ನೂತನ ಮನೆಯನ್ನು ನಿರ್ಮಿಸಿಕೊಡುವ ಮೂಲಕ ನಾಡಿನಾದ್ಯಂತ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸಂಕಲ್ಪವನ್ನು ನೂತನ ತಂಡವು ಈ ಸಂದರ್ಭದಲ್ಲಿ ವ್ಯಕ್ತಪಡಿಸಿತು.
ವೇದಿಕೆಯಲ್ಲಿ ಪ್ರಮುಖರಾದ ಶಿವಪ್ರಸಾದ್ ಮೈಲೇರಿ, ಶರತ್ ನಂದುಗುರಿ, ವಿಜೇತ್ ಬಜೆತಡ್ಕ, ಸಂದೇಶ್ ದರ್ಖಾಸ್, ಚೇತನ್ ಧೋಳ ಉಪಸ್ಥಿತರಿದ್ದರು. ಗ್ರಾಮದ ಹಿರಿಯರು, ಸಾರ್ವಜನಿಕರು ಹಾಗೂ ಯುವಕ ಮಂಡಲದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
