
ಕಡಬ: ಆರೋಗ್ಯಕರ ಜೀವನಶೈಲಿ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಸಮಾಜ ನಿರ್ಮಾಣದ ಆಶಯದೊಂದಿಗೆ ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಘಟಕದ ಸಹಯೋಗದಲ್ಲಿ ಹೊಸಮಠದಿಂದ ಕಡಬದವರೆಗೆ ಬುಧವಾರ (ಸೆಪ್ಟೆಂಬರ್ 9) ವಿಶೇಷ ಕಾಲ್ನಡಿಗೆ ಜಾಥಾ ಯಶಸ್ವಿಯಾಗಿ ನೆರವೇರಿತು.


ಹೊಸಮಠದಲ್ಲಿ ಜಾಥಾಕ್ಕೆ ಚಾಲನೆ – ಕಡಬದಲ್ಲಿ ಧ್ವಜಾರೋಹಣ: ಹೊಸಮಠ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಎನ್. ಕರುಣಾಕರ ಗೋಗಟೆ ಅವರು ಹೊಸಮಠ ಪೇಟೆಯಲ್ಲಿ ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಅಧಿಕೃತ ಚಾಲನೆ ನೀಡಿದರು.
ಜಾಥಾವು ಹೊಸಮಠದಿಂದ ಕಡಬ ಪಟ್ಟಣದವರೆಗೆ ಹೆಜ್ಜೆ ಹಾಕಿ ತಲುಪಿದ ಬಳಿಕ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಘಟಕದ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ಅವರು ಕಡಬದಲ್ಲಿ ಸಾಂಪ್ರದಾಯಿಕ ಜೇಸಿ ಧ್ವಜಾರೋಹಣ ನೆರವೇರಿಸಿದರು.
ಸಭಾ ಕಾರ್ಯಕ್ರಮ ಹಾಗೂ ಗಣ್ಯರ ಉಪಸ್ಥಿತಿ: ಜೇಸಿಐ ಕಡಬ ಕದಂಬದ ಅಧ್ಯಕ್ಷ ಜೇಮ್ಸ್ ಕ್ರಿಶಲ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರಿನ ಆರ್ಬಿಐ ಕರೆನ್ಸಿ ಪ್ರೆಸ್ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಪಿ. ವಿಲ್ಸನ್ ಅವರು ಮಾತನಾಡಿ, ಯುವಜನತೆ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ದೇಶದ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹಾರೈಸಿದರು.
ವೇದಿಕೆಯಲ್ಲಿ ಜೇಸಿ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ಅತಿಥಿಗಳಾಗಿ ಭಾಗವಹಿಸಿದ್ದರು. ಜೇಸಿ ನಿಕಟಪೂರ್ವ ಅಧ್ಯಕ್ಷೆ ವಿಶ್ರುತ ರಾಜೇಶ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಪ್ತಾಹ ನಿರ್ದೇಶಕ ಜೋಮೋನ್ ಮುಂತಾದವರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಗಾಜಿನ ಬಾಟಲಿ ವಿತರಣೆ: ದೈನಂದಿನ ಜೀವನದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಪರಿಸರ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಿಗೆ ಹಾಗೂ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಮರುಬಳಕೆಯ ಪರಿಸರಸ್ನೇಹಿ ಗಾಜಿನ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಶಿವಪ್ರಸಾದ್ ರೈ ಮೈಲೇರಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
