ಕೊಲೆ ಬೆದರಿಕೆಯೊಡ್ಡಿದ ವ್ಯಕ್ತಿ ವಿರುದ್ದ ಕಡಬ ಠಾಣೆಯಲ್ಲಿ ಕೇಸ್ ದಾಖಲು

kadaba times

ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಪೇಟೆಯಲ್ಲಿ ಮಗಳ ವಿವಾಹ ನಿಶ್ಚಿತಾರ್ಥಕ್ಕೆ ಆಹ್ವಾನಿಸಿಲ್ಲ ಎಂಬ ವೈಷಮ್ಯದಿಂದ ತರಕಾರಿ ಸಗಟು ವ್ಯಾಪಾರಿಯೊಬ್ಬರಿಗೆ  ಅಂಗಡಿ ಬಳಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆ ಎಸೆದು ಕೊಲೆ ಬೆದರಿಕೆ ಹಾಕಿದ ಆರೋಪದಡಿ ಆತೂರು ನಿವಾಸಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ / ಆತೂರು: ಮಗಳ ವಿವಾಹ ನಿಶ್ಚಿತಾರ್ಥಕ್ಕೆ ತನ್ನನ್ನು ಕರೆಯಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹಿರಿಯ ತರಕಾರಿ ವ್ಯಾಪಾರಿಯೊಬ್ಬರಿಗೆ ಅಂಗಡಿಯ ಬಳಿಯೇ ಅಡ್ಡಗಟ್ಟಿ ಬಾಯಿಗೆ ಬಂದಂತೆ ಬೈದು, ಕೈಯಲ್ಲಿದ್ದ ಮರದ ದೊಣ್ಣೆ ಎಸೆದು ಕೊಲೆ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಪೇಟೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಕೊಯಿಲ ಗ್ರಾಮದ ಏಂತಾರು ಮನೆ ನಿವಾಸಿ ಮಹಮ್ಮದ್ ನವಾಜ್ (32) ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಅಂಗಡಿ ಬಳಿ ಬಂದು ಅವಾಚ್ಯ ನಿಂದನೆ: ದೂರಿನ ಪ್ರಕಾರ,  ಆತೂರು ಪೇಟೆ ನಿವಾಸಿ ಅಬ್ದುಲ್ ಖಾದರ್ (58) ಅವರು ಆತೂರು ಪೇಟೆಯ ಬಿ.ಆರ್. ಕಾಂಪ್ಲೆಕ್ಸ್‌ನಲ್ಲಿ ಸಗಟು ತರಕಾರಿ ವ್ಯಾಪಾರ ನಡೆಸುತ್ತಿದ್ದಾರೆ.ಸೆ.4 ರಂದು  ರಾತ್ರಿ ತಮ್ಮ ವ್ಯಾಪಾರದ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಪರಿಚಯಸ್ಥನಾದ ಮಹಮ್ಮದ್ ನವಾಜ್ ಸ್ಥಳಕ್ಕೆ ಆಗಮಿಸಿದ್ದಾನೆ.

kadaba times
kadaba times

ಅಂಗಡಿ ಬಳಿ ಬರುತ್ತಿದ್ದಂತೆಯೇ ಅಬ್ದುಲ್ ಖಾದರ್ ಅವರನ್ನು ಉದ್ದೇಶಿಸಿ,ಬೈದು ”  ನನ್ನನ್ನು ನಿನ್ನ ಮಗಳ ನಿಶ್ಚಿತಾರ್ಥಕ್ಕೆ ಯಾಕೆ ಕರೆಯಲಿಲ್ಲ?” ಎಂದು ಅತ್ಯಂತ ಕೀಳು ಮಟ್ಟದ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರುಮಾಡಿದ್ದಾನೆ. ಇದರಿಂದ ಆತಂಕಗೊಂಡ ವ್ಯಾಪಾರಿ ಅಬ್ದುಲ್ ಖಾದರ್ ಅಂಗಡಿಯಿಂದ ಹೊರಬಂದು “ನೀನು ಯಾಕೆ ನನಗೆ ಬೈಯುತ್ತೀಯಾ, ಇಲ್ಲಿಂದ ಹೋಗು” ಎಂದು ಹೇಳಿ ವಾಪಸ್ಸು ಅಂಗಡಿಯ ಒಳಗೆ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ  ಮುಂದಕ್ಕೆ ಹೋಗದಂತೆ ದಾರಿಯುದ್ದಕ್ಕೂ ಅಡ್ಡಗಟ್ಟಿ ನಿಲ್ಲಿಸಿ ಮತ್ತೆ ಅವಾಚ್ಯವಾಗಿ ಬೈದಿದ್ದಾನೆ ಎನ್ನಲಾಗಿದೆ.

ಗಲಾಟೆ ಸದ್ದು ಕೇಳಿ ಸ್ಥಳೀಯರು  ಸ್ಥಳಕ್ಕೆ ಧಾವಿಸುವುದನ್ನು ಕಂಡ ಆರೋಪಿ  ತನ್ನ ಕೈಯಲ್ಲಿದ್ದ ಮರದ ದೊಣ್ಣೆಯನ್ನು ಅಂಗಡಿಯ ಮುಂದೆ ಬಲವಾಗಿ ಎಸೆದು, “ಈ ದೊಣ್ಣೆಯಿಂದಲೇ ನಿನ್ನ ಸಾವು, ಇದೇ ನಿನಗೆ ಸಾಕ್ಷಿ” ಎಂದು ಜೀವಬೆದರಿಕೆ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಕುಟುಂಬಸ್ಥರು ಬಂದು ಖಾದರ್ ಅವರನ್ನು ಮನೆಗೆ ಕರೆದೊಯ್ದಿದ್ದಾರೆ.

 ಠಾಣೆಯಲ್ಲಿ ಕೇಸ್ ದಾಖಲು: ತನ್ನ ಮಗಳ ವಿವಾಹ ನಿಶ್ಚಿತಾರ್ಥಕ್ಕೆ ಕರೆಯಲಿಲ್ಲ ಎಂಬ ದ್ವೇಷದಿಂದ ಸಾರ್ವಜನಿಕವಾಗಿ ಅವಮಾನಿಸಿ, ಪ್ರಾಣ ಬೆದರಿಕೆಯೊಡ್ಡಿದ ಆರೋಪಿ  ವಿರುದ್ಧ ಅಬ್ದುಲ್ ಖಾದರ್ ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ದೂರಿನನ್ವಯ ಕಡಬ ಪೊಲೀಸರು:ಅಪರಾಧ ಸಂಖ್ಯೆ: 105/2026ಕಲಂಗಳು: 126(2) (ಅಕ್ರಮ ತಡೆ), 352 (ಶಾಂತಿಭಂಗಕ್ಕೆ ಯತ್ನ/ಉದ್ರೇಕ), 351(3) (ಜೀವ ಬೆದರಿಕೆ) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.

Related Articles

Latest Articles