ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಕುಖ್ಯಾತ ಅಂತಾರಾಜ್ಯ ವಂಚಕ

kadaba times

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ಅಧಿಕಾರಿ ಎಂದು ಸೋಗು ಹಾಕಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚನೆ ಹಾಗೂ ಸುಲಿಗೆ ಎಸಗುತ್ತಿದ್ದ ಕುಖ್ಯಾತ ಅಂತಾರಾಜ್ಯ ವಂಚಕ ಸ್ಯಾಮ್ ಪೀಟರ್ (64) ಎಂಬಾತನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಸಿನಿಮೀಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದ್ದು, 7 ರಾಜ್ಯಗಳಲ್ಲಿ 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ.

kadaba times
uniq

ಮಂಗಳೂರು:ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ನಿರ್ದೇಶಕ ಹಾಗೂ ಉನ್ನತ ಅಧಿಕಾರಿ ಎಂದು ಪರಿಚಯಿಸಿಕೊಂಡು ಅಮಾಯಕರನ್ನು ಬೆದರಿಸಿ ಸುಲಿಗೆ ಮತ್ತು ವಂಚನೆ ನಡೆಸುತ್ತಿದ್ದ ಕುಖ್ಯಾತ ಅಂತಾರಾಜ್ಯ ವಂಚಕ, ನ್ಯಾಯಾಲಯದ ವಿಚಾರಣೆಗೆ ತಪ್ಪಿಸಿಕೊಂಡು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸ್ಯಾಮ್ ಪೀಟರ್‌ನನ್ನು ಮಂಗಳೂರು ನಗರ ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಕೇರಳದ ಕೊಲ್ಲಂ ಮೂಲದ, ಪ್ರಸ್ತುತ ಉತ್ತರ ಪ್ರದೇಶದ ಲಕ್ನೋದಲ್ಲಿ ನೆಲೆಸಿದ್ದ ಸ್ಯಾಮ್ ಪೀಟರ್ @ ಡ್ಯಾನಿ ತಾರಕನ್ @ ಆಂಟನಿ (64) ಬಂಧಿತ ಕುಖ್ಯಾತ ಆರೋಪಿ.

ನಕಲಿ ಅಧಿಕಾರಿಯ ವಂಚನೆಯ ಜಾಲ:ಆರೋಪಿ ಸ್ಯಾಮ್ ಪೀಟರ್ ತನ್ನದೇ ಆದ ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡು, ರಾಷ್ಟ್ರೀಯ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಯಂತೆ ಪೋಸ್ ನೀಡುತ್ತಿದ್ದನು. ಬ್ಯಾಂಕ್ ವಂಚನೆ, ತೆರಿಗೆ ವಂಚನೆ ಹಾಗೂ ಹಣಕಾಸಿನ ವ್ಯಾಜ್ಯಗಳಲ್ಲಿ ಸಿಲುಕಿರುವ ಶ್ರೀಮಂತರನ್ನು ಗುರಿಯಾಗಿಸಿಕೊಂಡು, ತಾನು ಅಧಿಕಾರ ಹೊಂದಿರುವ NCIB ಅಧಿಕಾರಿ ಎಂದು ನಂಬಿಸಿ ಪ್ರಕರಣ ಮುಚ್ಚಿಹಾಕುವುದಾಗಿ ಕೋಟ್ಯಂತರ ರೂಪಾಯಿ ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದನು.

ಈ ಹಿಂದೆ ದಿನಾಂಕ 16-08-2019 ರಂದು ಮಂಗಳೂರು ಕದ್ರಿ ಠಾಣಾ ಪೊಲೀಸರು ಪಂಪ್‌ವೆಲ್‌ನಲ್ಲಿರುವ ಲಾಡ್ಜ್ ಮೇಲೆ ದಾಳಿ ನಡೆಸಿ, ಶ್ಯಾಮ್ ಪೀಟರ್ ಸೇರಿದಂತೆ ಆತನ ಗ್ಯಾಂಗ್‌ನ 8 ಮಂದಿಯನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ ಕಳೆದ 3 ವರ್ಷಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದನು.

ಒಬ್ಬನೇ ವ್ಯಕ್ತಿಗೆ ಬರೋಬ್ಬರಿ 11 ಹೆಸರುಗಳು:ಪೊಲೀಸರ ಕಣ್ಣು ತಪ್ಪಿಸಲು ಮತ್ತು ಅಪರಾಧ ಎಸಗಿದ ಬಳಿಕ ಗುರುತು ಮರೆಮಾಚಲು ಆರೋಪಿ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳು ಹಾಗೂ ನಕಲಿ ದಾಖಲೆಗಳನ್ನು ಬಳಸುತ್ತಿದ್ದನು. ತನಿಖೆ ವೇಳೆ ಈತನ ಕೆಳಗಿನ 11 ಅಲಿಯಾಸ್ ಹೆಸರುಗಳು ಪತ್ತೆಯಾಗಿವೆ:

ಆಂಟನಿ,ರಾಹುಲ್ ಪೀಟರ್,ಸ್ಯಾಮ್ ಪೀಟರ್,ರಾಜೇಶ್ ರಾಬಿನ್ಸನ್,ರೀತು ರಿಚರ್ಡ್,ರಾಯ್ ಜೇಕಬ್,ರಾಬಿನ್ ರಿಚರ್ಡ್ಸನ್,ರಾಬಿನ್ ಸನ್,ಆಂಟೋನಿ ಪ್ರಾನ್ಸಿಸ್,ಶಾರೂನ್ ಪ್ರಾನ್ಸಿಸ್,ಡ್ಯಾನಿ ತಾರಕನ್ (ಪ್ರಸ್ತುತ ಬಳಸುತ್ತಿದ್ದ ಹೆಸರು)

kadaba times
kadaba times

2001 ರಿಂದಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್:ಆರೋಪಿ ಸ್ಯಾಮ್ ಪೀಟರ್ ಸಾಮಾನ್ಯ ವಂಚಕನಾಗಿರದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ವಂಚನೆ ಎಸಗಿರುವ ಹಳೆಯ ಅಪರಾಧಿಯಾಗಿದ್ದಾನೆ. ‘ರಾಹುಲ್ ಪೀಟರ್’ ಎಂಬ ಹೆಸರಿನಲ್ಲಿ ಈತನ ವಿರುದ್ಧ 2001 ರಿಂದಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (Interpol Red Corner Notice) ಜಾರಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

7 ರಾಜ್ಯಗಳಲ್ಲಿ 17ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು:ಆರೋಪಿಯ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಮೋಸ, ಸುಲಿಗೆ ಹಾಗೂ ವಂಚನೆಗೆ ಸಂಬಂಧಿಸಿದಂತೆ 17ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ:

  • ಕರ್ನಾಟಕ: ಮಂಗಳೂರು ನಗರದ ಪೂರ್ವ (ಕದ್ರಿ) ಪೊಲೀಸ್ ಠಾಣೆ, ಉಳ್ಳಾಲ, ಕೊಣಾಜೆ, ಬೆಂಗಳೂರು, ಚಿಕ್ಕಬಳ್ಳಾಪುರ, ಉಡುಪಿ ನಗರ ಹಾಗೂ ಕೊಡಗಿನ ಕುಶಾಲನಗರ.

  • ಇತರೆ ರಾಜ್ಯಗಳು: ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಮಧ್ಯಪ್ರದೇಶ.

ಪ್ರಸ್ತುತ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಪ್ರಕರಣದಲ್ಲಿ 17 ಬಾರಿ ವಾರೆಂಟ್ ಹಾಗೂ ಮಂಗಳೂರು ಪೂರ್ವ ಠಾಣೆ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಹೊರಡಿಸಲಾಗಿದ್ದು, ಬಳಿಕ ನ್ಯಾಯಾಲಯದಿಂದ ‘ಪ್ರೊಕ್ಲಮೇಷನ್’ (ಘೋಷಿತ ಅಪರಾಧಿ) ಎಂದು ಘೋಷಿಸಲಾಗಿತ್ತು.

ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Related Articles

Latest Articles