
ಕಾಫಿ ತೋಟದ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಬಂಧನ ಭೀತಿಯಿಂದ ಕಾಡಿನೊಳಗೆ ಓಡಿದ ವ್ಯಕ್ತಿಯೊಬ್ಬರು ಆಯತಪ್ಪಿ ಜಾರಿ ಬಂಡೆಗೆ ತಲೆ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಡಬಗೆರೆ ಸಮೀಪ ನಡೆದಿದೆ.


ಗುಡ್ಡೆಕೊಪ್ಪ ಗ್ರಾಮದ ನಿವಾಸಿ ರಮೇಶ್ (35) ಮೃತಪಟ್ಟ ದುರ್ದೈವಿ.
ಕಾಫಿ ತೋಟದಲ್ಲಿ ನಡೆಯುತ್ತಿತ್ತು ಇಸ್ಪೀಟ್ ಜುಗಾರಿ:
ಎನ್.ಆರ್.ಪುರ ತಾಲೂಕಿನ ಬಾಸಾಪುರ ಅರಣ್ಯ ಪ್ರದೇಶದ ವ್ಯಾಪ್ತಿಯ ಕಡಬಗೆರೆ ಸಮೀಪದ ಖಾಸಗಿ ಕಾಫಿ ತೋಟದಲ್ಲಿ ನಿರಂತರವಾಗಿ ಅಕ್ರಮ ಅಂದರ್-ಬಾಹರ್ ಜೂಜಾಟ ನಡೆಯುತ್ತಿರುವ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧಾರದ ಮೇಲೆ ಪೊಲೀಸರ ತಂಡವು ಆ.28 ರಂದು ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ್ದರು.
ಪೊಲೀಸರು ದಾಳಿ ನಡೆಸಿದ ವೇಳೆ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ 9 ಜನರ ಪೈಕಿ ರಮೇಶ್ ಅವರು ಪೊಲೀಸರಿಗೆ ಹೆದರಿ ಜೀವಭಯದಿಂದ ಕಾಡಿನೊಳಗೆ ಓಡಿದ್ದಾರೆ.


ಬಂಡೆಗೆ ತಲೆ ಬಡಿದು ಸ್ಥಳದಲ್ಲೇ ಸಾವು ಶಂಕೆ:
ಕಾಡಿನ ಹಳ್ಳ-ಕೊಳ್ಳಗಳಲ್ಲಿ ಓಡುವಾಗ ಆಯತಪ್ಪಿ ಜಾರಿ ಬಿದ್ದ ರಮೇಶ್ ಅವರ ತಲೆ ಸಮೀಪದಲ್ಲಿದ್ದ ಬಂಡೆಗೆ ಬಲವಾಗಿ ತಗುಲಿದೆ. ತೀವ್ರ ರಕ್ತಸ್ರಾವವಾದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ದಾಳಿ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ 9 ಮಂದಿಯ ಪೈಕಿ ಇಬ್ಬರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಮರುದಿನ ಬೆಳಗ್ಗೆ ಪತ್ತೆಯಾದ ಮೃತದೇಹ:
ರಾತ್ರಿಯಾದರೂ ರಮೇಶ್ ಮನೆಗೆ ಹಿಂತಿರುಗದ ಕಾರಣ ಗಾಬರಿಗೊಂಡ ಕುಟುಂಬಸ್ಥರು ಇಂದು (ಆ.29) ಬೆಳಿಗ್ಗೆ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ, ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟ ಸ್ಥಿತಿಯಲ್ಲಿ ರಮೇಶ್ ಅವರ ಶವ ಪತ್ತೆಯಾಗಿದೆ.ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
