
ನೆಲ್ಯಾಡಿ / ಉಪ್ಪಿನಂಗಡಿ:ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಹುಣ್ಸೆಬೆಟ್ಟು ಎಂಬಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಮಾರಕಾಯುಧಗಳಿಂದ ಹಲ್ಲೆಗೆ ಯತ್ನಿಸಿ, ಜೀವಬೆದರಿಕೆಯೊಡ್ಡಿರುವ ಘಟನೆ ನಡೆದಿದ್ದು, ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ನೆಲ್ಯಾಡಿ ಗ್ರಾಮದ ಹುಣ್ಸೆಬೆಟ್ಟು ನಿವಾಸಿ ಹೆಚ್. ಸೂರ್ಯನಾರಾಯಣ ಜೋಗಿತ್ತಾಯ ಹಲ್ಲೆ ಯತ್ನಕ್ಕೆ ಒಳಗಾದ ದೂರುದಾರರು.
ಘಟನೆಯ ವಿವರ:ದೂರುದಾರ ಸೂರ್ಯನಾರಾಯಣ ಜೋಗಿತ್ತಾಯ ಅವರಿಗೆ ಲೋಕ ಅದಾಲತ್ನಲ್ಲಿ ಮಂಜೂರಾಗಿರುವ ಜಮೀನಿನಲ್ಲಿ ಅವರು ತಂತಿ ಬೇಲಿ ನಿರ್ಮಿಸಿ, ಹುಲ್ಲು ತೆಗೆಯುವ ಕೃಷಿ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ವಾಸುದೇವ ಗೌಡ ಎಂಬಾತನು ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ್ದಾನೆ.
ಅಲ್ಲದೆ, ಕೈಯಲ್ಲಿದ್ದ ಕೊಕ್ಕೆ ಕತ್ತಿ ಹಾಗೂ ದೊಣ್ಣೆಯಿಂದ ಸೂರ್ಯನಾರಾಯಣ ಜೋಗಿತ್ತಾಯ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಜೋಗಿತ್ತಾಯರನ್ನು ಕೊಲೆ ಮಾಡುವುದಾಗಿ ನೇರವಾಗಿ ಜೀವಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ರಕ್ಷಣೆಗೆ ಬಂದ ಪತ್ನಿ, ತಮ್ಮನ ಮೇಲೂ ಹಲ್ಲೆಗೆ ಯತ್ನ:ಜೋಗಿತ್ತಾಯರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ರಕ್ಷಣೆಗೆ ಧಾವಿಸಿದ ಅವರ ಪತ್ನಿ ಹಾಗೂ ತಮ್ಮನ ಮೇಲೂ ಆರೋಪಿ ವಾಸುದೇವ ಗೌಡ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಘಟನೆಯ ತೀವ್ರ ಆಘಾತ ಹಾಗೂ ಗದ್ದಲದಿಂದಾಗಿ ಸೂರ್ಯನಾರಾಯಣ ಜೋಗಿತ್ತಾಯ ಅವರು ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೂರ್ಯನಾರಾಯಣ ಜೋಗಿತ್ತಾಯ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
