
ಪುತ್ತೂರು: ಇಲ್ಲಿನ ನಗರದ ದರ್ಬೆ ಎಂಬಲ್ಲಿನ ಅಂಗಡಿಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಗಲಾಟೆಯ ವಿಚಾರವನ್ನು ಮುಂದಿಟ್ಟುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಕೆರಳಿಸಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


’ದಿನೇಶ್ ಪಂಜಿಗ’ ಎಂಬ ಹೆಸರಿನ ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ವಾಟ್ಸಾಪ್ನಲ್ಲಿ ಕೋಮು ಪ್ರಚೋದನೆ ಮತ್ತು ಬಂದ್ ಕರೆ:ದರ್ಬೆ ಗಲಾಟೆಯ ಬೆನ್ನಲ್ಲೇ, ಆರೋಪಿಯು ವಾಟ್ಸಾಪ್ ಮೂಲಕ ವಿವಿಧ ಗ್ರೂಪ್ಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಧಾರ್ಮಿಕ ದ್ವೇಷ ಹುಟ್ಟುಹಾಕುವ ಮತ್ತು ಜನರಲ್ಲಿ ಭೀತಿ ಉಂಟುಮಾಡುವಂತಹ ಸಂದೇಶಗಳನ್ನು ವ್ಯಾಪಕವಾಗಿ ಹರಡಿಸಿದ್ದನು.
ಅಷ್ಟೇ ಅಲ್ಲದೆ, ಬಂದ್ಗೆ ಕರೆ ನೀಡುವ ಮೂಲಕ ಜನರು ಕಾನೂನುಬಾಹಿರವಾಗಿ ಅಕ್ರಮಕೂಟ ಸೇರಿ ಶಾಂತಿಭಂಗ ಹಾಗೂ ಹಿಂಸಾತ್ಮಕ ಕೃತ್ಯಗಳನ್ನು ಎಸಗುವಂತೆ ದುಷ್ಪ್ರೇರಣೆ ನೀಡಿರುವುದು ಪೊಲೀಸ್ ಪರಿಶೀಲನೆಯಲ್ಲಿ ಪತ್ತೆಯಾಗಿದೆ.


ಬಿಎನ್ಎಸ್ ಕಾಯ್ದೆಯಡಿ ಎಫ್ಐಆರ್ ದಾಖಲು:
ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ, ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆದಾರನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 100/2026
ಕಲಂಗಳು: 353(2), 57, 189 (The Bharatiya Nyaya Sanhita – BNS, 2023)
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡುವ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಅಥವಾ ಕಾನೂನುಬಾಹಿರ ಪ್ರತಿಭಟನೆ/ಬಂದ್ಗೆ ಪ್ರಚೋದನೆ ನೀಡುವ ಪೋಸ್ಟ್ಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
