ಕೊಯಿಲ ಗ್ರಾಮಸಭೆಯಲ್ಲಿ ಭಾರಿ ಗದ್ದಲ

kadaba times

ಕಡಬ ತಾಲೂಕಿನ ಕೊಯಿಲ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ಗೋಕುಲನಗರ ಬಸ್‌ನಿಲ್ದಾಣ ಸಮೀಪದ ಪಂಚಾಯಿತಿ ಕಟ್ಟಡದಲ್ಲಿ ಹಸಿಮೀನು ಹಾಗೂ ಕೋಳಿ ಮಾರಾಟದ ಅಂಗಡಿ ಬಾಡಿಗೆ ನೀಡಿರುವುದನ್ನು ವಿರೋಧಿಸಿ ಮತ್ತು ಬೆಂಬಲಿಸಿ ಗ್ರಾಮಸ್ಥರ ನಡುವೆ ತೀವ್ರ ವಾಗ್ವಾದ ನಡೆಯಿತು. ಇದರೊಂದಿಗೆ ರಸ್ತೆ ದುರಸ್ತಿ ಹಾಗೂ ಅಧಿಕಾರಿಗಳ ಗೈರುಹಾಜರಿ ವಿಚಾರಗಳೂ ಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾದವು.

kadaba times
uniq

ಕೊಯಿಲ / ಕಡಬ:ಕಡಬ ತಾಲೂಕಿನ ಕೊಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಡಳಿತಾಧಿಕಾರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭರತ್ ಬಿ.ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯು ಬಸ್‌ನಿಲ್ದಾಣದ ಬಳಿ ಮೀನು-ಕೋಳಿ ಮಾರಾಟದ ಕೊಠಡಿ ಹಂಚಿಕೆ ಹಾಗೂ ಗ್ರಾಮೀಣ ರಸ್ತೆಗಳ ದುರಸ್ತಿ ವಿಚಾರವಾಗಿ ಭಾರಿ ಗದ್ದಲ, ಆಕ್ರೋಶಕ್ಕೆ ಸಾಕ್ಷಿಯಾಯಿತು.ತಾ.ಪಂ. ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಜಲಜಾಕ್ಷಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ಬಸ್‌ನಿಲ್ದಾಣದ ಬಳಿ ಮೀನು-ಕೋಳಿ ಮಾರಾಟ: ಪರ-ವಿರೋಧ ತೀವ್ರ ಚರ್ಚೆ:

ಗೋಕುಲನಗರದ ಸಾರ್ವಜನಿಕ ಬಸ್‌ನಿಲ್ದಾಣದ ಪಕ್ಕದಲ್ಲೇ ಇರುವ ಗ್ರಾ.ಪಂ. ಕಟ್ಟಡದಲ್ಲಿ ಹಸಿಮೀನು ಹಾಗೂ ಕೋಳಿ ಮಾರಾಟಕ್ಕೆ ಕೋಣೆ ಬಾಡಿಗೆ ನೀಡಿರುವುದನ್ನು ರಿಕ್ಷಾ ಚಾಲಕ ಅಶ್ರಫ್, ಗ್ರಾಮಸ್ಥರಾದ ಹನೀಫ್, ಜಮಾಲ್, ಕಲೀಂ ಮತ್ತಿತರರು ತೀವ್ರವಾಗಿ ವಿರೋಧಿಸಿದರು.

  • ವಿರೋಧಿಸಿದವರ ವಾದ: “ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ನಿಲ್ಲುವ ಬಸ್‌ನಿಲ್ದಾಣದ ಪಕ್ಕವೇ ಮೀನು-ಕೋಳಿ ತ್ಯಾಜ್ಯದಿಂದ ದುರ್ನಾತ ಬೀರಿ ಜನರ ಆರೋಗ್ಯ ಹದಗೆಡಲಿದೆ. ಮನವಿ ಸಲ್ಲಿಸಿದ್ದರೂ ಏಲಂ ಮಾಡಲಾಗಿದೆ. ಅವಕಾಶ ನೀಡಿದರೆ ಪ್ರತಿಭಟನೆ ನಡೆಸುತ್ತೇವೆ, ಎಂದು ಎಚ್ಚರಿಸಿದರು.

  • ಬೆಂಬಲಿಸಿದವರ ವಾದ: ಗ್ರಾಮಸ್ಥರಾದ ಯದುಶ್ರೀ ಆನೆಗುಂಡಿ ಹಾಗೂ ಪ್ರಕಾಶ್ ಕೆಮ್ಮಾರ ಮಾತನಾಡಿ, “ಸಾಮಾನ್ಯ ಸಭೆಯ ಅಧಿಕೃತ ನಿರ್ಣಯದಂತೆ ಬಹಿರಂಗ ಏಲಂನಲ್ಲಿ ಠೇವಣಿ ಕಟ್ಟಿ ಕೊಠಡಿ ಪಡೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲೂ ಅಂಗಡಿಗಳ ಪಕ್ಕದಲ್ಲೇ ಮಾರಾಟ ನಡೆಯುತ್ತದೆ. ಅಧಿಕೃತ ಕಟ್ಟಡದಲ್ಲಿ ಬಾಡಿಗೆ ಪಡೆದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಿ, ಸ್ವಚ್ಛತೆ ಕಾಪಾಡದಿದ್ದರೆ ಕ್ರಮ ಕೈಗೊಳ್ಳಿ” ಎಂದು ಪ್ರತಿಪಾದಿಸಿದರು.

  • ಅಧಿಕಾರಿಗಳ ಸ್ಪಷ್ಟನೆ: ನಿಕಟಪೂರ್ವಾಧ್ಯಕ್ಷೆ ಪುಷ್ಪಾಸುಭಾಷ್ ಶೆಟ್ಟಿ ಹಾಗೂ ಪಿಡಿಒ ಸಂದೇಶ ಕೆ.ಎನ್. ಮಾತನಾಡಿ, “ಹಿಂದಿನ ಸಾಮಾನ್ಯ ಸಭೆಯ ನಿರ್ಣಯದಂತೆ 1 ವರ್ಷದ ಅವಧಿಗೆ ಏಲಂ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಮೇಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.

ರಸ್ತೆ ನಾದುರಸ್ತಿ: ಚುನಾವಣೆ ಬಹಿಷ್ಕಾರ, ತೆರಿಗೆ ನಿರಾಕರಣೆಯ ಎಚ್ಚರಿಕೆ: ಎಲ್ಯಂಗ, ಪಾಪುದಮಂಡೆ ಮತ್ತು ಹೇಂತಾರು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿರುವ ವಿಚಾರವಾಗಿ ಗ್ರಾಮಸ್ಥರಾದ ಕಲೀಂ, ಸುಲೈಮಾನ್, ಸಿರಾಜ್, ನಾಸೀರ್ ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನ-ಮಸೀದಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ರಿಕ್ಷಾ ಪಲ್ಟಿಯಾಗಿ ಮಗು ಗಾಯಗೊಂಡಿದ್ದರೂ ದುರಸ್ತಿ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ಚುನಾವಣೆ ಬಹಿಷ್ಕಾರ ಹಾಗೂ ಪಂಚಾಯತ್ ತೆರಿಗೆ ಪಾವತಿಸುವುದಿಲ್ಲ ಎಂದು ಎಚ್ಚರಿಸಿದರು. ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ದುರಸ್ತಿ ಹಾಗೂ ಶಾಶ್ವತ ಅಭಿವೃದ್ಧಿಗೆ ಅಂದಾಜುಪಟ್ಟಿ ಸಲ್ಲಿಸುವುದಾಗಿ ಆಡಳಿತಾಧಿಕಾರಿ ಭರತ್ ಬಿ.ಎಂ. ಭರವಸೆ ನೀಡಿದರು.

kadaba times
kadaba times

ಸಭೆಯಲ್ಲಿ ಚರ್ಚೆಯಾದ ಇತರ ಪ್ರಮುಖ ವಿಷಯಗಳು:

  • ವಸತಿ ನಿವೇಶನ: ನೂಜಿ ಎಂಬಲ್ಲಿರುವ 2.75 ಎಕರೆ ಜಾಗವನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಜುನೈದ್ ಕೆಮ್ಮಾರ ಒತ್ತಾಯಿಸಿದರು.

  • ಅಪಾಯಕಾರಿ ಮರಗಳು: ಕೊನೆಮಜಲು ಭಾಗದಲ್ಲಿ ಕಡಿದು ಚರಂಡಿಗೆ ಹಾಕಲಾದ ಮರಗಳನ್ನು ತೆರವುಗೊಳಿಸಲು ಹಾಗೂ ಗಂಡಿಬಾಗಿಲು-ಉಪ್ಪಿನಂಗಡಿ ರಸ್ತೆಯ ಅಪಾಯಕಾರಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಸೂಚಿಸಲಾಯಿತು.

  • ಕೂಸಿನ ಮನೆ & ಮಾಸಾಶನ: ಕೂಸಿನ ಮನೆ ಯೋಜನೆಯ ಸದ್ಬಳಕೆ ಹಾಗೂ 4-5 ತಿಂಗಳಿಂದ ಸ್ಥಗಿತಗೊಂಡಿರುವ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಬಿಡುಗಡೆಗೆ ಸಾರ್ವಜನಿಕರು ಆಗ್ರಹಿಸಿದರು.

  • ಕಂದಾಯ ಅದಾಲತ್ & ಪೊಲೀಸ್ ಜನಸಂಪರ್ಕ: 9/11 ಸಮಸ್ಯೆ ಪರಿಹಾರಕ್ಕೆ ಗ್ರಾಮದಲ್ಲೇ ಕಂದಾಯ ಅದಾಲತ್ ಮತ್ತು ಅಕ್ರಮ ಚಟುವಟಿಕೆ ತಡೆಗೆ ಪೊಲೀಸ್ ಜನಸಂಪರ್ಕ ಸಭೆ ನಡೆಸಲು ಒತ್ತಾಯ ಕೇಳಿಬಂತು.

  • ಪಿಡಿಒ ಸೇವೆಗೆ ಮನವಿ: ಹಾಲಿ ಪಿಡಿಒ ಸಂದೇಶ ಕೆ.ಎನ್. ಅವರನ್ನು ವಾರದಲ್ಲಿ ಕನಿಷ್ಠ 2 ದಿನ ಕೊಯಿಲ ಪಂಚಾಯಿತಿಗೆ ನಿಯೋಜಿಸುವಂತೆ ಗ್ರಾಮಸ್ಥರು ಕೋರಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ. ಮಂಜುನಾಥ್ ಭಟ್, ಡಾ. ಮಂಜುನಾಥ ಪಾಟೀಲ್, ಎ. ಭವಾನಿ, ನವೀನ ಎಂ., ಯಶೋಧರ, ಗಾಯತ್ರಿ ಹೆಚ್. ಉಪಸ್ಥಿತರಿದ್ದರು. ಪಿಡಿಒ ಸಂದೇಶ್ ಕೆ.ಎನ್. ವರದಿ ಮಂಡಿಸಿದರು, ಕಾರ್ಯದರ್ಶಿ ಶಾರದಾ ಪಿ.ಎ. ಸ್ವಾಗತಿಸಿದರು.

Related Articles

Latest Articles