
ಕಡಬ ಟೈಮ್ಸ್, ಪ್ರಮುಖ ಸುದ್ದಿ: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಯಶವಂತಪುರ ಜಂಕ್ಷನ್ ನಡುವೆ ವಿಶೇಷ ರೈಲು ಸಂಚರಿಸಲಿದೆ.


ಸೆ.30 ರಂದು( ಮಂಗಳವಾರ) ರೈಲು ಸಂಖ್ಯೆ 06257 ಯಶವಂತಪುರ ಜಂ.-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ಅಂದರೆ ಮಹಾನವಮಿಯ ಶುಭದಿನವಾದ ಅ.1 ರಂದು ( ಬುಧವಾರ) ಬೆಳಗ್ಗೆ 11:15ಕ್ಕೆ ಮಂಗಳೂರಿನ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ದಿನ ಅಂದರೆ ಅ.1ರಂದು ( ಬುಧವಾರ) ರೈಲು ಸಂಖ್ಯೆ 06258 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ನಿಂದ ಮಧ್ಯಾಹ್ನ 2:35ಕ್ಕೆ ಹೊರಟು ರಾತ್ರಿ 11:30ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ಮಂಗಳೂರು ಜಂಕ್ಷನ್ ಹಾಗು ಯಶವಂತಪುರ ಜಂಕ್ಷನ್ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.


ಈ ರೈಲಿನಲ್ಲಿ 2 ಲಗೇಜ್ ಕಮ್ ಗಾರ್ಡ್ ಕೋಚ್, 4 ಜನರಲ್ ಕೋಚ್,11 ಸ್ಲೀಪರ್ ಕ್ಲಾಸ್, 3 ತೃತೀಯ ದರ್ಜೆಯ ಎಸಿ, 2 ದ್ವಿತೀಯ ದರ್ಜೆಯ ಎಸಿ ಕೋಚುಗಳು ಇರಲಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟನೆಯಲ್ಲಿ ತಿಳಿಸಿದೆ.
ಈಗಾಗಲೇ ರೈಲು ಸಂಖ್ಯೆ 06257 ಯಶವಂತಪುರ ಜಂ.-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲಿನ ಟಿಕೇಟು ಬುಕ್ಕಿಂಗ್ ಆರಂಭಗೊಂಡಿದೆ. ಶೀಘ್ರದಲ್ಲಿ ರೈಲು ಸಂಖ್ಯೆ 06258 ಮಂಗಳೂರು ಜಂಕ್ಷನ್-ಯಶವಂತಪುರ ಜಂ. ವಿಶೇಷ ಎಕ್ಸ್ಪ್ರೆಸ್ ರೈಲಿನ ಟಿಕೇಟು ಬುಕ್ಕಿಂಗ್ ಕೂಡ ಆರಂಭಗೂಳ್ಳಲಿದೆ.
ಈ ವಿಶೇಷ ರೈಲು ಓಡಿಸಲು ಕ್ರಮ ಕೈಗೊಂಡ ನೈರುತ್ಯ ರೈಲ್ವೆ ವಲಯಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರಿಗೆ ಬಂದು ಹಿಂದಿರುಗುವ ಯೋಜನೆ ರೂಪಿಸುತ್ತಿರುವವರು ಈ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ನಾವು ಮನವಿ ಮಾಡುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಹರ್ಷ ವ್ಯಕ್ತ ಪಡಿಸಿದೆ.
