
ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ಬರೆಂಬೆಟ್ಟು ನಿವಾಸಿ, ಕೃಷಿಕ ಹಾಗೂ ಮರದ ಕೆತ್ತನೆ ಕಲಾವಿದ ಆನಂದ ಪೂಜಾರಿ (53) ಅವರು ಆಗಸ್ಟ್ 12 ರಂದು ಸಂಜೆ ತೋಟದಿಂದ ಹುಲ್ಲು ಹೊತ್ತು ತರುತ್ತಿದ್ದ ವೇಳೆ ಹಠಾತ್ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.


ರಾಮಕುಂಜ / ಕಡಬ: ಹಳೆನೇರೆಂಕಿ ಗ್ರಾಮದ ಬರೆಂಬೆಟ್ಟು ನಿವಾಸಿ, ಕೃಷಿಕ ಹಾಗೂ ಮರದ ಕೆತ್ತನೆ ಕೆಲಸಗಾರ ಆನಂದ ಪೂಜಾರಿ (53) ಅವರು ಆಗಸ್ಟ್ 12 ರಂದು ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಆಗಸ್ಟ್ 12 ರಂದು ಸಂಜೆಯ ವೇಳೆಗೆ ಆನಂದ ಪೂಜಾರಿಯವರು ತಮ್ಮ ತೋಟದಲ್ಲಿ ದನ-ಕರುಗಳಿಗೆ ಹುಲ್ಲು ಕತ್ತರಿಸಿ, ಅದನ್ನು ತಲೆಯಲ್ಲಿ ಹೊತ್ತುಕೊಂಡು ಮನೆಗೆ ಬರುತ್ತಿದ್ದಾಗ ಹಠಾತ್ತನೆ ತಲೆತಿರುಗಿ ಕುಸಿದು ಬಿದ್ದಿದ್ದರು.


ಇದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಅವರನ್ನು ಉಪಚರಿಸಿ, ಪ್ರಥಮ ಚಿಕಿತ್ಸೆಗಾಗಿ ಆಲಂಕಾರಿನ ಕ್ಲಿನಿಕ್ಗೆ ಕರೆತಂದರು. ಬಳಿಕ ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಮರದ ಕೆತ್ತನೆ ಕಲಾವಿದರಾಗಿದ್ದರು: ಮೃತ ಆನಂದ ಪೂಜಾರಿಯವರು ಸದಾ ಲವಲವಿಕೆಯಿಂದ ಇರುತ್ತಿದ್ದು, ಕೃಷಿ ಕಾಯಕದ ಜೊತೆಗೆ ಮರದ ಸುಂದರ ಕೆತ್ತನೆ ಕೆಲಸಗಳನ್ನು (Wood Carving) ಮಾಡುತ್ತಾ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಪರಿಚಯ ಹಾಗೂ ಸ್ನೇಹ ಸಂಪಾದಿಸಿದ್ದರು.
