
ಕಡಬ ತಾಲೂಕಿನ ರಾಮಕುಂಜ ಗ್ರಾಮದ ಶಾರದಾನಗರದಲ್ಲಿ ಮನೆಯೊಳಗೆ ಒಂಟಿಯಾಗಿ ವಾಸವಾಗಿದ್ದ ವೃದ್ಧ ಸುಂದರ ಶೆಟ್ಟಿ (75) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ನೋಡಿದಾಗ ಅವರು ಮಲಗಿದ್ದ ಸ್ಥಳದಲ್ಲೇ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ರಾಮಕುಂಜ / ಕಡಬ: ರಾಮಕುಂಜ ಗ್ರಾಮದ ಶಾರದಾನಗರದಲ್ಲಿ ಮನೆಯೊಳಗೆ ಒಂಟಿಯಾಗಿ ವಾಸವಿದ್ದ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆಗಸ್ಟ್ 13ರ ಗುರುವಾರ ಸಂಜೆ ಬೆಳಕಿಗೆ ಬಂದಿದೆ.
ಮೃತರನ್ನು ಮೂಲತಃ ಆಲಂಕಾರು ಗ್ರಾಮದ ಕಿನ್ನಿಗೋಳಿ ನಿವಾಸಿ, ಪ್ರಸ್ತುತ ರಾಮಕುಂಜ ಶಾರದಾನಗರದ ನಿವಾಸಿ ಸುಂದರ ಶೆಟ್ಟಿ (75) ಎಂದು ಗುರುತಿಸಲಾಗಿದೆ.
ಸುಂದರ ಶೆಟ್ಟಿಯವರು ಕಳೆದ ಹಲವು ವರ್ಷಗಳಿಂದ ರಾಮಕುಂಜ ಗ್ರಾಮದ ಶಾರದಾನಗರದಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ತಮ್ಮ ಪತ್ನಿಯೊಂದಿಗೆ ನೆಲೆಸಿದ್ದರು. ಸುಮಾರು ಒಂದು ತಿಂಗಳ ಹಿಂದೆ ಅವರ ಪತ್ನಿ ಬೆಂಗಳೂರಿನಲ್ಲಿರುವ ಮಗನ ಮನೆಗೆ ತೆರಳಿದ್ದ ಕಾರಣ, ಸುಂದರ ಶೆಟ್ಟಿಯವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು.ಆಗಸ್ಟ್ 8 ರಂದು ಇವರ ಹಿರಿಯ ಪುತ್ರ ಮನೆಗೆ ಭೇಟಿ ನೀಡಿ ತಂದೆಯ ಯೋಗಕ್ಷೇಮ ವಿಚಾರಿಸಿ ತೆರಳಿದ್ದರು.


ದುರ್ವಾಸನೆ ಬಂದಾಗ ಬಯಲಾದ ದುರಂತ: ಕಳೆದ ಎರಡು-ಮೂರು ದಿನಗಳಿಂದ ಮನೆಯ ಬಾಗಿಲು ಸತತವಾಗಿ ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರು, ಗುರುವಾರ ಮನೆಯ ಸಮೀಪ ತೆರಳಿದಾಗ ಒಳಗಿನಿಂದ ತೀವ್ರ ದುರ್ವಾಸನೆ ಬರುತ್ತಿರುವುದು ಕಂಡುಬಂದಿದೆ. ತಕ್ಷಣವೇ ಸ್ಥಳೀಯರು ಮೃತರ ಪುತ್ರ ಸೋಮಸುಂದರ ಶೆಟ್ಟಿ ಹಾಗೂ ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಕುಟುಂಬಸ್ಥರು ಮನೆಯೊಳಗೆ ಒಳಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿ, ಬಾಗಿಲು ಮುರಿದು ಒಳಪ್ರವೇಶಿಸಿದಾಗ ಸುಂದರ ಶೆಟ್ಟಿಯವರ ಮೃತದೇಹ ಚಾಪೆಯ ಮೇಲೆ ಮಲಗಿದ ಸ್ಥಿತಿಯಲ್ಲೇ ಕೊಳೆತು ಹೋಗಿರುವುದು ಪತ್ತೆಯಾಗಿದೆ.
ಮೃತರು ನಿದ್ರೆಯಲ್ಲಿದ್ದಾಗಲೇ ಆಕಸ್ಮಿಕವಾಗಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಮೃತರ ಪುತ್ರ ಸೋಮಸುಂದರ ಶೆಟ್ಟಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
