
ಕಡಬ: ನಮ್ಮ ಹಿರಿಯರು ಉಳಿಸಿ ಬೆಳೆಸಿಕೊಂಡು ಬಂದಿರುವ ತುಳುನಾಡಿನ ವೈಭವೋಪೇತ ಆಚಾರ-ವಿಚಾರ ಹಾಗೂ ಸುಂದರ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಸೆಂಟ್ ಜೋಕಿಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಪಾವ್ಲ್ ಪ್ರಕಾಶ್ ಡಿ ಸೋಜಾ ತಿಳಿಸಿದರು.


ಅವರು ಕಡಬದ ಸೆಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ವತಿಯಿಂದ ಆಯೋಜಿಸಲಾಗಿದ್ದ ‘ಆಟಿದ ಪೊರ್ಲು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಮೇಶ್ ಸಾಯಿರಾಂ ನೂಜಿಬಾಳ್ತಿಲ, “ಮಕ್ಕಳು ತಮ್ಮ ಹಿರಿಯರಿಂದ ಉತ್ತಮ ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಕಲಿಯಬೇಕು. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯವಂತರಾಗಿರಲು ನಮ್ಮ ಸಾಂಪ್ರದಾಯಿಕ ಹಾಗೂ ಪ್ರಾಕೃತಿಕ ಆಟಿ ತಿಂಗಳ ಆಹಾರ ಪದ್ಧತಿಯನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಗಣೇಶ್ ಡಿ – (ಸೆಂಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ವಿಭಾಗದ ಪಿಟಿಎ ಉಪಾಧ್ಯಕ್ಷರು) ಶ್ರೀಮತಿ ಪವಿತ್ರ ರೈ ( ಪ್ರೌಢಶಾಲಾ ವಿಭಾಗದ ಪಿಟಿಎ ಉಪಾಧ್ಯಕ್ಷರು) ವಂದನೀಯ ಫಾದರ್ ಸುನಿಲ್ ಪ್ರವೀಣ್ ಪಿಂಟೋ ( ಸೆಂಟ್ ಆನ್ಸ್ ಶಾಲಾ ಪ್ರಾಂಶುಪಾಲರು) ಕಿರಣ್ ಕುಮಾರ್ ( ಸೆಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು)ಶ್ರೀಮತಿ ಶ್ರೀಲತಾ ಕೆ.( ಪ್ರೌಢಶಾಲಾ ಮುಖ್ಯ ಶಿಕ್ಷಕಿ), ಸಿಸ್ಟರ್ ಹಿಲ್ದಾ ರೊಡ್ರಿಗಸ್ ( ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ) ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಸಭಾ ಕಾರ್ಯಕ್ರಮ ಮುಗಿದ ಬಳಿಕ ಶಾಲಾ ಮಕ್ಕಳಿಂದ ನಯನಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳು, ತುಳುನಾಡು ಜ್ಞಾನವರ್ಧಕ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿಶೇಷವಾಗಿ ಆಟಿ ತಿಂಗಳಿನಲ್ಲಿ ಸಿದ್ಧಪಡಿಸುವ ವಿವಿಧ ಬಗೆಯ ಆರೋಗ್ಯಕರ ತಿಂಡಿ-ತಿನಿಸುಗಳ ಪ್ರದರ್ಶನ ಹಾಗೂ ಪ್ರಾಚೀನ ಕಾಲದಲ್ಲಿ ಹಿರಿಯರು ಬಳಸುತ್ತಿದ್ದ ಅಪರೂಪದ ಗೃಹಬಳಕೆ ವಸ್ತುಗಳ ಪ್ರದರ್ಶನವು ಎಲ್ಲರ ಗಮನಸೆಳೆಯಿತು.
ಸೆಂಟ್ ಜೋಕಿಮ್ಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಆಫೀಕ್ ಸ್ವಾಗತಿಸಿದರು. 9ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಮೀಮ್ ವಂದನಾರ್ಪಣೆ ಮಾಡಿದರು. 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಲಹರಿ ಕಾರ್ಯಕ್ರಮ ನಿರೂಪಿಸಿದರು.
